ಪತ್ರಿಕಾ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸವಾಗಲಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಗತ್ತಿನ ಆಗು-ಹೋಗುಗಳ ಮಾಹಿತಿ, ಜ್ಞಾನ ನೀಡುವ ಜೊತೆಗೆ ಧಾಮಿಕ, ಶೈಕ್ಷಣಿಕ, ರಾಜಕೀಯ, ಕೃಷಿ ಹೀಗೆ ಸಮಾಜದ ಎಲ್ಲ ಸ್ತರದ ಪ್ರತಿಬಿಂಬವಾಗಿ ಜವಾಬ್ದಾರಿಯುತ ಕಾರ್ಯನಿರ್ವಹಿಸುವ ಪತ್ರಿಕಾ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಸಮಾಜದಿಂದ ಆಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಶನಿವಾರ ತಾಲೂಕಾ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ಮತ್ತು ವೈದ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸುಧಾರಣೆಯ ಅಸ್ತçಗಳಾದ ಪತ್ರಿಕೆಗಳಿಗೆ ಅದರದ್ದೇ ಆದ ಜವಾಬ್ದಾರಿಗಳಿವೆ. ಇಂದು ಎಲ್ಲ ಬದಲಾವಣೆ, ಸುಧಾರಣೆಗಳು ಮಾಧ್ಯಮದವರಿಂದಲೇ ಆಗಬೇಕು ಎಂಬ ಸಾಮಾಜಿಕ ಮನೋಧೋರಣೆ ಬದಲಾಗಬೇಕು. ಬದಲಾವಣೆಗೆ ತಕ್ಕಂತೆ ನಮ್ಮ ವೃತ್ತಿ ಕೌಶಲ್ಯ ಬದಲಾಯಿಸಿಕೊಳ್ಳಬೇಕಿದೆ. ಪತ್ರಕರ್ತರು ಪಕ್ಷ, ಜಾತಿ, ಧರ್ಮ, ಸ್ನೇಹ, ಸಂಬಂಧ, ರಾಜಕೀಯದ ಮುಲಾಜಿಗೆ ಒಳಗಾಗದೇ ಕರ್ತವ್ಯ ನಿಷ್ಠೆ ತೋರಬೇಕು. ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ, ಅಸಹಾಯಕರ, ನೊಂದವರ ಧ್ವನಿಯಾಗಿ ನಿಲ್ಲಬೇಕು. ಇಂದು ಪತ್ರಿಕಾರಂಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದರೂ ಅತ್ಯಂತ ಕಡಿಮೆ ಬೆಲೆಗೆ ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪುವ ವ್ಯವಸ್ಥೆ ರಾಜ್ಯದಲ್ಲಿದೆ. ಜ್ಞಾನ ಸಂಪಾದನೆಯ ಅಸ್ತçಗಳಾಗಿರುವ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ತಾಲೂಕಾ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲೂಕಾ ವೈದ್ಯರ ಸಂಘದ ಅಧ್ಯಕ್ಷರು, ಹಿರಿಯ ವೈದ್ಯರಾದ ಡಾ. ಎಸ್.ಸಿ ಮಲ್ಲಾಡದ ಮತ್ತು ಐಎಂಎ ತಾಲೂಕಾ ಅಧ್ಯಕ್ಷ ಡಾ. ಪಿ.ಡಿ. ತೋಟದ ಮಾತನಾಡಿ, ಮೊಬೈಲ್, ಕಂಪ್ಯೂಟರ್, ದೃಶ್ಯ ಮಾಧ್ಯಮದ ಪ್ರಭಾವದ ನಡುವೆಯೂ ಪತ್ರಿಕೆಗಳು ಜನರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿವೆ. ಆರೋಗ್ಯ, ಶಿಕ್ಷಣ, ರಾಜಕೀಯ ವಿವಿಧ ಕ್ಷೇತ್ರಗಳು ಮೌಲ್ಯ ಕಳೆದುಕೊಂಡು ಜಿಡ್ಡುಗಟ್ಟಿದಾಗ ಎಚ್ಚರಿಸುವ ಕಾರ್ಯವನ್ನು ಪತ್ರಿಕಾ ರಂಗ ಮಾಡುತ್ತದೆ. ಸಮಾಜ ಪತ್ರಿಕಾ ಕ್ಷೇತ್ರವನ್ನು ಗೌರವದಿಂದ ಕಾಣಬೇಕು. ಪಾಲಕರು ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಆಡಂಬರ, ಆರ್ಥಿಕ ವೆಚ್ಚವಿಲ್ಲದೇ ಜೀವ ಉಳಿಸುವ ರಕ್ತದಾನ ಶಿಬಿರ ಮಾಡಿರುವುದು ಪ್ರಶಂಸನೀಯ ಎಂದರು.

ಈ ವೇಳೆ ಡಾ. ಅರುಂಧತಿ ಕುಲಕರ್ಣಿ, ಡಾ. ಸುಭಾಸ ದಾಯಗೊಂಡ, ಡಾ. ಶ್ರೀಕಾಂತ ಕಾಟೇವಾಲೆ, ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಾ. ಉಮೇಶ ಹಾಗೂ 50 ಬಾರಿ ರಕ್ತದಾನ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಶಿವಯ್ಯ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಲೂಕಾ ನೌಕರ ಸಂಘದ ಅಧ್ಯಕ್ಷ ಗುರುರಾಜ ಹವಳದ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಡಾ. ಎಸ್.ಬಿ. ಪಾಟೀಲ, ಹಿರಿಯ ಮುಖಂಡ ಚಂಬಣ್ಣ ಬಾಳಿಕಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ವೀರಣ್ಣ ಪವಾಡದ, ಹಿರಿಯ ಪತ್ರಕರ್ತ ರಮೇಶ ನಾಡಗೇರ ಪ್ರಸ್ತಾವಿಕ ಮಾತನಾಡಿದರು. ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಪಾಲ್ಗೊಂಡು ಪತ್ರಕರ್ತರನ್ನು ಸನ್ಮಾನಿಸಿದರು.

ಪತ್ರಕರ್ತರಾದ ನಾಗರಾಜ ಹಣಗಿ, ದಿಗಂಬರ ಪೂಜಾರ, ಅಶೋಕ ಸೊರಟೂರ, ಸೋಮಣ್ಣ ಯತ್ತಿನಹಳ್ಳಿ, ಕರಿಯಪ್ಪ ಶಿರಹಟ್ಟಿ, ಶಿವಲಿಂಗಯ್ಯ ಹೊತಗಿಮಠ, ಪರಮೇಶ ಲಮಾಣಿ, ಮಾಳಿಂಗರಾಯ ಪೂಜಾರ, ಸುರೇಶ ಲಮಾಣಿ, ಮಂಜು ಲಮಾಣಿ, ಇನ್ನರ್‌ವ್ಹಿಲ್ ಕ್ಲಬ್ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ರಕ್ತದಾನ ಶಿಬಿರದಲ್ಲಿ 40 ಜನ ರಕ್ತದಾನಿಗಳು ರಕ್ತದಾನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲು ಕಳಸಾಪುರ ಮಾತನಾಡಿ, ಇಂದು ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಪ್ರಗತಿಯಿಂದ ಹೃದಯ ಸೇರಿ ಮನುಷ್ಯನಿಗೆ ಕೃತಕವಾದ ಅಂಗಗಳನ್ನು ಅಳವಡಿಸಬಹುದು. ಆದರೆ, ರಕ್ತವನ್ನು ಮಾತ್ರ ಕೃತಕವಾಗಿ ಸೃಷ್ಟಿಸಲಾಗದು. ಇದೀಗ ರಕ್ತದ ಅವಶ್ಯಕತೆ ಸಾಕಷ್ಟಿದ್ದು, ಸ್ವಯಂ ರಕ್ತದಾನ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕಿನ ಶಿಕ್ಷಕರು, ಸಂಘಟನೆಯವರು, ನೌಕರ ವರ್ಗದ ಸಹಕಾರದೊಂದಿಗೆ ಅರ್ಥಪೂರ್ಣ, ಸಮಾಜೋಪಯೋಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here