ನರಗುಂದ:- ಕರ್ನಾಟಕದಲ್ಲಿ ರೈತ ಹೋರಾಟ ಹಾಗೂ ಸಂಘಟನೆ ಉಗಮಕ್ಕೆ ಕಾರಣವಾದ ನರಗುಂದ ರೈತ ಬಂಡಾಯ ನಡೆದು ಇಂದಿಗೆ 45 ವರ್ಷ ಗತಿಸಿದೆ. ಇದರ ಆಚರಣೆ ರೈತ ಹಾಗೂ ವಿವಿಧ ಸಂಘಟನೆಗಳಿಂದ ನಡೆಯುತ್ತಿದೆ.
ಅದರಂತೆ ಬಂಡಾಯದ ನಾಡು ನರಗುಂದ ಪಟ್ಟಣದಲ್ಲಿ ಇಂದು ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಸಚಿವರು, ಶಾಸಕರು, ರೈತರ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ರು. ಅಷ್ಟೇ ಅಲ್ಲ ಇದೇ ಜಾಗದಲ್ಲಿ ಮಹದಾಯಿ ಹೋರಾಟಕ್ಕೆ ರೈತರು ನಡೆಸುತ್ತಿರೋ ಹೋರಾಟಕ್ಕೆ ಬರೋಬ್ಬರಿ 10 ವರ್ಷ ಪೂರ್ಣಗೊಂಡಿದೆ. ನಿರಂತರ ರೈತರ ಹೋರಾಟದ ವೇದಿಕೆ ಕೀಳಿಸಲು ರಾಜಕೀಯ ಪಕ್ಷಗಳ ನಾಯಕರು ಹುನ್ನಾರ ನಡೆಸಿದ್ದಾರೆ ಅಂತ ರೈತರು ಈ ವೇಳೆ ಬಾಂಬ್ ಹಾಕಿದ್ದಾರೆ. ರಾಜಕೀಯ ನಾಯಕರ ಕುತಂತ್ರಕ್ಕೆ ಬಂಡಾಯದ ನೆಲದ ರೈತರು ರೊಚ್ಚಿಗೆದ್ದಿದ್ದಾರೆ.
ಎಸ್, 1980ರಲ್ಲಿ ನೀರಿನ ಕರದ ವಿಷಯವಾಗಿ ದೊಡ್ಡ ರೈತರ ಬಂಡಾಯವೇ ನಡೆದು ಹೋಗಿತ್ತು. ಆಗ ಪೊಲೀಸರ ಗುಂಡಿಗೆ ಓರ್ವ ರೈತರ ಬಲಿಯಾಗಿದ್ದ. ಅದೇ ಸ್ಥಳದಲ್ಲಿ ಇಂದು ಬಂಡಾಯದ ನಾಡಿನಲ್ಲಿ ರೈತರ ಮಹಾಸಂಗವೇ ಆಗಿತ್ತು. ಹೌದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಬಂಡಾಯದ ನೆಲಕ್ಕೆ ಆಗಮಿಸಿದ್ರು. ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಸಚಿವರು, ಶಾಸಕರು, ರೈತ ಮುಖಂಡರು, ಗಣ್ಯರು ಗೌರವ ನಮನ ಸಲ್ಲಿಸಿದ್ರು. ಈ ಎಲ್ಲ ದೃಶ್ಯಗಳು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕಂಡು ಬಂದಿದೆ.
ಇದೇ ವೇಳೆ ಮಹದಾಯಿ ಯೋಜನೆ ವಿಷಯವಾಗಿ ಸಚಿವ ಎಚ್ ಕೆ ಪಾಟೀಲ್, ಶಾಸಕ ಎನ್ ಎಚ್ ಕೋನರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಹಿನ್ನಡೆಯಾಗಿದೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಪರಿಸರ ಇಲಾಖೆ ಅನುಮತಿ ಕೊಡಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿ ಕ್ರೆಡಿಟ್ ಗಾಗಿ ಜಟಾಪಟಿ ನಡೆದಿದೆ. ಎಚ್ ಕೆ ಪಾಟೀಲ್ರು ಕೇಂದ್ರ ಬಿಜೆಪಿ ವಿಳಂಬ ನೀತಿ ಅನುಸರಿಸುತ್ತಿದೆ ಅಂತ ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದ್ರೆ, ನರಗುಂದ ಬಿಜೆಪಿ ಶಾಸಕ ಸಿ ಸಿ ಪಾಟೀಲ್, ಈ ಯೋಜನೆ ನಾವು ಮಾಡಿದ್ದು, ನಮ್ಮ ಅವಧಿಯಲ್ಲೇ ಹೆಚ್ಚು ಅನುದಾನ ನೀಡಿದ್ದು ಅಂತ ತಿರಗೇಟು ನೀಡಿದ್ದಾರೆ.
ಒಟ್ಟಾರೆ ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ರಾಜಕೀಯ ಮಾಡುತ್ತಿವೆ ಅಂತ ಹೋರಾಟಗಾರರು ಕಿಡಿಕಾರಿದ್ದಾರೆ. ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಯ ಹೋರಾಟ 4 ದಶಕಗಳು ಕಳೆದಿವೆ. ಆದ್ರೆ, ಇನ್ನೂ ಜಾರಿಯಾಗಿಲ್ಲ. ಕಾಂಗ್ರೆಸ್, ಬಿಜೆಪಿ ನಾಯಕರು ತಮ್ಮ ರಾಜಕೀಯ ದಾಳವಾಗಿ ಯೋಜನೆ ಬಳಸಿಕೊಳ್ತಿವೆ. ಹೀಗಾಗಿ ಹೋರಾಟಗಾರರು ಕಾನೂನು ಹೋರಾಟ ಮಾಡ್ತಾಯಿದ್ದಾರೆ. ಕ್ರೆಡಿಟ್ ಗಾಗಿ ಮಹದಾಯಿ ಹೋರಾಟದ ವೇದಿಕೆ ಕಿತ್ತು ಹಾಕಲು ಷಡ್ಯಂತ್ರ ನಡೆದಿದೆ. ಇದು ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ. ಮುಂದೆನಾಗುತ್ತೋ ಅನ್ನೋದು ಕಾದು ನೋಡಬೇಕಿದೆ.