ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದಿಂದ ಅನ್ಯಾಯ

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: 1980ರಲ್ಲಿ ನಡೆದ ಹೋರಾಟ ಕೇವಲ ಬೆಟರ್‌ಮೆಂಟ್ ಲೆವ್ಹಿ ವಿರುದ್ಧದ ಹೋರಾಟವಲ್ಲ. ಅದು ನರಗುಂದ ಭಾಗದ ರೈತರ ಮೇಲೆ ನಡೆದ ಅನ್ಯಾಯ, ಅಗೌರವ, ನ್ಯಾಯಯುತ ಸರ್ಕಾರದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗದಿದ್ದರಿಂದ ರೈತರ ತಾಳ್ಮೆಯ ಕಟ್ಟೆಯೊಡೆದು ನರಗುಂದ ಬಂಡಾಯಕ್ಕೆ ಕಾರಣವಾಗಿದೆ. ಈ ಹೋರಾಟವನ್ನು ಸ್ಮರಿಸಿ ಮೆಲುಕು ಹಾಕುವುದರೊಂದಿಗೆ ಹುತಾತ್ಮ ರೈತರ ಸ್ಮರಣಾರ್ಥ 45 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣಕ್ಕೆ ಅವಕಾಶ ದೊರೆತಿರುವುದು ನನಗೆ ವೈಯಕ್ತಿಕವಾಗಿ ವಿಶೇಷ ಸಮಾಧಾನ, ಸಂತೃಪ್ತಿಯನ್ನು ತಂದಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಸುದೀರ್ಘ 45 ವರ್ಷಗಳ ನಿರಂತರ ಹೋರಾಟದ ಫಲವಾಗಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಶಾಸಕರಾದ ಸಿ.ಸಿ. ಪಾಟೀಲ, ಎನ್.ಎಚ್. ಕೋನರೆಡ್ಡಿ, ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ ಅವರೊಡಗೂಡಿ ಸೋಮವಾರ ಭೂಮಿಪೂಜೆ ನೆರವೇರಿಸಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು.

ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಸ್ಮಾರಕ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ನೀಲನಕ್ಷೆ ಬಿಡುಗಡೆಗೊಳಿಸಿದ್ದೇನೆ. ಮುಂದಿನ ವರ್ಷ ಜು.21ರ ಒಳಗಾಗಿ ಅತ್ಯಂತ ಸುಂದರವಾದ ಉದ್ಯಾನ, ಹುತಾತ್ಮ ರೈತರ ಸ್ಮಾರಕ ಭವನ ನಿರ್ಮಿಸಿ ಉದ್ಘಾಟನೆಗೊಳಿಸಲಾಗುವುದು. ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡದೆ ಅನ್ಯಾಯವೆಸಗುತ್ತಿದೆ. ಪರಿಣಾಮ ನಮ್ಮ ರಾಜ್ಯಕ್ಕೆ ನ್ಯಾಯಾಧಿಕರಣದಿಂದ ನೀರು ಹಂಚಿಕೆಯಾಗಿದ್ದರೂ ನಮಗೆ ಬಳಕೆಗೆ ಸಿಗುತ್ತಿಲ್ಲ. ವನ್ಯಜೀವಿ, ಪರಿಸರ ಇಲಾಖೆಯಿಂದ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಕ್ಷಣವೇ ಅನುಮತಿ ನೀಡಿದರೆ ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ತಕ್ಷಣವೇ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, 1980ರ ದಶಕದಲ್ಲಿ ಪೊಲೀಸರ ಗೋಲಿಬಾರ್‌ಗೆ ಚಿಕ್ಕನರಗುಂದದ ವೀರಪ್ಪ ಕಡ್ಲಿಕೊಪ್ಪ, ಅಳಗವಾಡಿಯ ಬಸಪ್ಪ ಲಕ್ಕುಂಡಿ ಹುತಾತ್ಮರಾದರು. ಅಂದಿನ ರೈತರು ಕೆಚ್ಚೆದೆಯ ಹೋರಾಟದಿಂದ ತಮ್ಮ ರಕ್ತ ಹರಿಸಿದ್ದರ ಪರಿಣಾಮ ಇಂದು ನಾವೆಲ್ಲರೂ ಅಲ್ಪ ಪ್ರಮಾಣದ ನೀರನ್ನ ಕುಡಿಯಲು, ಕೃಷಿಗೆ ಬಳಕೆ ಮಾಡಿಕೊಳ್ಳುವಂತಾಗಿದೆ. ರೈತರ ಬಹುದಿನಗಳ ಹೋರಾಟದ ಮನವಿ ಸ್ಪಂದಿಸಿ ಸಚಿವ ಎಚ್.ಕೆ. ಪಾಟೀಲ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ವಿಶೇಷ ಮುತುವರ್ಜಿ ವಹಿಸಿ ಭೂಮಿಪೂಜೆ ನೆರವೇರಿಸಿದ್ದು ಶ್ಲಾಘನೀಯ ಎಂದರು.

ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ, ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್, ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು. ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಭೂದಾನ ಮಾಡಿರುವ ದೇಸಾಯಿಗೌಡ ಪಾಟೀಲ, ಸಲೀಂಸಾಬ ಮೇಗಲಮನಿ ಅವರನ್ನು ಸಚಿವರು ಸನ್ಮಾನಿಸಿದರು.

ಡಾ. ಸಂಗಮೇಶ ಕೊಳ್ಳಿಯವರ, ರಾಜುಗೌಡ ಕೆಂಚನಗೌಡ್ರ, ಉಮೇಶಗೌಡ ಪಾಟೀಲ, ರಾಜು ಕಲಾಲ, ವಿವೇಕ ಯಾವಗಲ್, ಬಸವರಾಜ ಸಾಬಳೆ, ಶಂಕರಪ್ಪ ಅಂಬಲಿ, ಚನ್ನು ನಂದಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ರೋಹನ್, ತಹಸೀಲ್ದಾರ ಶ್ರೀಶೈಲ ತಳವಾರ, ದಶರಥ ಗಾಣಿಗೇರ, ಬಿ.ಎಸ್. ಉಪ್ಪಾರ, ವಿಠ್ಠಲ ಜಾಧವ ಸೇರಿದಂತೆ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

11 ವರ್ಷಗಳ ಹಿಂದೆ ಅಪರಕೃಷ್ಣಾ ಪ್ರಾಜೆಕ್ಟ್ನ ಕುರಿತು ಬ್ರಿಜೇಶಕುಮಾರ ಅವರು ಎಡಬ್ಲೂಡಿಪಿ ನ್ಯಾಯಾಧಿಕರಣದಿಂದ ಮಧ್ಯಂತರ ತೀರ್ಪು ಸಲ್ಲಿಕೆಯಾಗಿದೆ. 10ರಿಂದ 15 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಈ ಯೋಜನೆಯಲ್ಲಿ ತೊಡಗಿಸಿದೆ. ಆದರೆ, ಈವರೆಗೂ ಕೇಂದ್ರ ಸರ್ಕಾರ ರಾಜ್ಯ ಪತ್ರದಲ್ಲಿ ಹೊರಡಿಸದಿರುವುದು ಅಸಮಾಧಾನಕರ ಸಂಗತಿ. ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಎಲ್ಲ ಯೋಜನೆಗಳಿಗೂ ಅನುಮತಿ ನೀಡಬೇಕೆಂದು ಸಚಿವ ಎಚ್.ಕೆ. ಪಾಟೀಲ ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here