ವಿಜಯಸಾಕ್ಷಿ ಸುದ್ದಿ, ರೋಣ: ಮಾತೃ ಹೃದಯಿ ಎಂದೇ ಪ್ರಖ್ಯಾತರಾದ ರೋಣ ಪಟ್ಟಣದ ಅನ್ನಪೂರ್ಣ ಗುರುಪಾದಗೌಡ ಪಾಟೀಲರಿಗೆ ರಾಮದುರ್ಗಾ ಪಟ್ಟಣದ ಡಾ. ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಸೇವಾ ಟ್ರಸ್ಟ್ ಕೊಡಮಾಡುವ ಪ್ರತಿಷ್ಠಿತ ಅಕ್ಕಮಹಾದೇವಿ ಪ್ರಶಸ್ತಿ ಲಭಿಸಿದ್ದು, ಪಟ್ಟಣದ ಜನತೆಯಲ್ಲಿ ಹರ್ಷ ಮೂಡಿಸಿದೆ.
ಅನ್ನಪೂರ್ಣ ಪಾಟೀಲರು ಶಾಸಕ ಜಿ.ಎಸ್. ಪಾಟೀಲರ ಧರ್ಮ ಪತ್ನಿಯಾಗಿದ್ದು, ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರೋಣ ತಾಲೂಕು ಸೇರಿದಂತೆ ಮತಕ್ಷೇತ್ರದ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ ದೀಪವಾದವರು. ಸೇವಾ ಟ್ರಸ್ಟ್ ಅವರ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರಕಟಿಸಿರುವುದು ಅವರ ಸೇವೆ ಸಂದ ಗೌರವವಾಗಿದೆ.
ಮಾತೃ ಹೃದಯಿ ಅನ್ನಪೂರ್ಣ ಜಿ.ಪಾಟೀಲರು ರಾಜಕೀಯ ಕ್ಷೇತ್ರದಿಂದ ದೂರವೇ ಉಳಿದು, ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದವರು. ಎಂದಿಗೂ ಸಭೆ-ಸಮಾರಂಭಗಳ ಗೋಜಿಗೆ ಹೋಗದೆ ಎಲೆ ಮರೆಯ ಕಾಯಿಯಂತೆ ಬಡ, ಕೂಲಿ ಕಾರ್ಮಿಕರ, ಮಹಿಳೆಯರ ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಪಟ್ಟಣದ ಮಹಿಳೆಯರ ಪಾಲಿಗೆ ಆಶಾಕಿರಣವಾಗಿದ್ದಾರೆ.
ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಇವರು ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗೆ ತಮ್ಮ ಸೇವೆಯನ್ನು ಸಮರ್ಪಿಸಿದವರು. ಜಾತ್ಯಾತೀತ, ಪಕ್ಷಾತೀತವಾಗಿ ಬಡವ-ಬಲ್ಲಿದ ಎನ್ನದೆ ಮನೆಗೆ ಬಂದ ಮಹಿಳೆಯರಿಗೆ ತಮ್ಮಿಂದಾಗುವ ನೆರವು ನಿಡಿದವರು. ಸಮಾಜ ಮೆಚ್ಚುವ ಸೇವೆಯನ್ನು ಮಾಡಿದರೂ ಕೂಡ ಯಾವುದೇ ಪ್ರಚಾರವನ್ನು ಬಯಸಿದವರಲ್ಲ.
“ಮಾತೃ ಹೃದಯಿ ಅನ್ನಪೂರ್ಣ ಜಿ.ಪಾಟೀಲರು ಬಡ, ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅಕ್ಕಮಹಾದೇವಿ ಪ್ರಶಸ್ತಿ ನೀಡಿದ್ದು ಸ್ವಾಗತರ್ಹವಾಗಿದೆ. ಅವರು ಎಂದೂ ಪ್ರಚಾರ ಬಯಸದೇ ತಮ್ಮ ಸೇವೆಯನ್ನು ಸಮಾಜಕ್ಕೆ ಸಲ್ಲಿಸಿದ್ದಾರೆ”
– ಬಸ್ಸಮ್ಮ ಕೊಪ್ಪದ.
ಅಧ್ಯಕ್ಷರು, ಪುರಸಭೆ ರೋಣ.
“ನಿಸ್ವಾರ್ಥವಾಗಿ, ಪ್ರಚಾರ ಬಯಸದೆ ಬಡ ಮಹಿಳೆಯರ, ಕೂಲಿ ಕಾರ್ಮಿಕರ, ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸಮಾಜ ಸೇವೆ ಸಲ್ಲಿಸುತ್ತಿರುವ ಅನ್ನಪೂರ್ಣ ಜಿ.ಪಾಟೀಲರಿಗೆ ಅಕ್ಕಮಹಾದೇವಿ ಪ್ರಶಸ್ತಿ ಲಭಿಸಿದ್ದು ಪಟ್ಟಣದ ಜನತೆ ಸೇರಿ ನಮಗೂ ಕೂಡ ಹರ್ಷ ಮೂಡಿಸಿದೆ”
– ಗುರುಪಾದ ಶ್ರೀಗಳು,
ಹಜರತ್ ಸುಲೇಮಾನ ಶಾವಲಿ ಅಜ್ಜನವರು, ರೋಣ.



