ವಿಜಯಸಾಕ್ಷಿ ಸುದ್ದಿ, ರೋಣ: ಹೆಣ್ಣುಮಕ್ಕಳ ಗರ್ಭಕಂಠದ ಕ್ಯಾನ್ಸರ್‌ನಿಂದ ಭವಿಷ್ಯದ ಜೀವನವನ್ನು ರಕ್ಷಿಸಲು ಎಚ್‌ಪಿವಿ ಲಸಿಕೆ ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಪಾಲಕರು ಭಯ ಪಡದೆ ಲಸಿಕಾ ಅಭಿಯಾನ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಕರೆ ನೀಡಿದರು.
ಅವರು ಸೋಮವಾರ ಪಟ್ಟಣದ ಗುರುಭವನದಲ್ಲಿ ಆರೋಗ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರೋಣ, ಗಜೇಂದ್ರಗಡ ತಾಲೂಕು ಸೇರಿದಂತೆ ಮತಕ್ಷೇತ್ರದಲ್ಲಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿಕೊಂಡು ಅಲ್ಲಿನ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆಯನ್ನು ನೀಡಲಾಗುವುದು. ಅಲ್ಲದೆ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರು ಈ ಲಸಿಕೆ ಪಡೆಯಲು ಹಿಂದೇಟು ಹಾಕಬಾರದು. 9 ವರ್ಷದಿಂದ 14 ವರ್ಷದವರು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟವರು ಸಹ ಲಸಿಕೆಯನ್ನು ಪಡೆಯಬೇಕು ಎಂದರು.
ಮೊದಲು ಜಿಲ್ಲಾ ಮತ್ತು ತಾಲೂಕಾ ವೈದ್ಯರುಗಳು ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಎಚ್‌ಪಿವಿ ಲಸಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿ, ನಂತರ ಲಸಿಕೆ ನೀಡುವ ಕಾರ್ಯ ಮಾಡುತ್ತಾರೆ. ಮುಖ್ಯವಾಗಿ ಈ ಲಸಿಕೆ ಪಡೆಯುವುದರಿಂದ ಹೆಣ್ಣುಮಕ್ಕಳಿಗೆ ತಗಲುವ ಬಹುತೇಕ ರೋಗಗಳನ್ನು ತಡೆಗಟ್ಟಬಹುದು. ಮಹಿಳೆಯರ ಆರೋಗ್ಯ ಸ್ಥಿರತೆಯನ್ನು ಕಾಪಾಡುವಲ್ಲಿ ಲಸಿಕೆ ಸಹಕಾರಿಯಾಗಿದ್ದು, 15 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೆಚ್ಚಿನ ಡೋಸೇಜ್ ನೀಡಬೇಕಾಗುತ್ತದೆ ಎಂದು ವಿವರಿಸಿದರು.
ಈ ಲಸಿಕಾ ಅಭಿಯಾನ ರಾಜ್ಯದಲ್ಲಿ ಪ್ರಥಮ ಬಾರಿಗೆ ರೋಣ ತಾಲೂಕಿನಲ್ಲಿ ಜುಲೈ 30ರಂದು ಆರಂಭವಾಗಲಿದೆ. ಶಿಕ್ಷಣ ಇಲಾಖೆಯ ಪ್ರಕಾರ ಒಟ್ಟು 9 ಸಾವಿರ ವಿದ್ಯಾರ್ಥಿನಿಯರಿಗೆ ಈ ಯೋಜನೆಯ ಲಾಭ ಸಿಗಲಿದೆ. ಮೊದಲಬಾರಿಗೆ 500 ವಿದ್ಯಾರ್ಥಿನಿಯರಿಗೆ ಲಸಿಕೆ ನೀಡಲಾಗುತ್ತಿದ್ದು, ನಂತರ ಪ್ರತಿ ಗ್ರಾಮಗಳಿಗೆ ತೆರಳಿ ಲಸಿಕೆಯನ್ನು ನೀಡಲಾಗುವುದು. ಸಾಮಾನ್ಯವಾಗಿ ಯಾವುದೇ ತರಹದ ಲಸಿಕೆಯನ್ನು ನೀಡಿದಾಗ ಆಗುವ ಲಕ್ಷಣಗಳ ಹೊರತಾಗಿ ಬೇರೆ ಯಾವುದೇ ರಿತಿಯ ಅಡ್ಡ ಪರಿಣಾಮಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಐ.ಎಸ್. ಪಾಟೀಲ, ವೀರಣ್ಣ ಶೆಟ್ಟರ, ಬಸವರಾಜ ನವಲಗುಂದ, ಡಾ. ಶಕೀಲ್ ಅಹ್ಮದ ಕುಂದರಗಿ, ಡಾ. ಬಿ.ಎಸ್. ಭಜಂತ್ರಿ, ಡಾ. ಐ.ಬಿ. ಕೊಟ್ಟೂರಶೆಟ್ಟಿ, ಬಿಒಇ ಅಂದಪ್ಪ, ಅಕ್ಷರದಾಸೋಹಾಧಿಕಾರಿ ಕೆ.ಎಲ್. ನಾಯಕ, ಆರೋಗ್ಯ ಶಿಕ್ಷಣಾಧಿಕಾರಿ ಕೆ.ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.
ನಾನು ನನ್ನ ಕುಟುಂಬದ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆಯನ್ನು ಈಗಾಗಲೇ ಕೊಡಿಸಿದ್ದೇನೆ. ಪಾಲಕರು ಹೆಣ್ಣುಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಲಸಿಕಾ ಅಭಿಯಾನವನ್ನು ಪ್ರೋತ್ಸಾಹಿಸಬೇಕು.
– ಜಿ.ಎಸ್. ಪಾಟೀಲ.
ಶಾಸಕರು-ರೋಣ.