ವಿಜಯಸಾಕ್ಷಿ ಸುದ್ದಿ, ನರಗುಂದ: ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಚುನಾವಣೆ ಗೆಲ್ಲುವ ಪರಿಸ್ಥಿತಿ ರಾಜ್ಯ, ದೇಶದೆಲ್ಲೆಡೆ ನಿರ್ಮಾಣವಾಗಿದೆ. ಪರಿಣಾಮ ಇಂದಿನ ಯಾವುದೇ ಸರ್ಕಾರಗಳು ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರ ಪರವಾಗಿರದೆ ಕಾರ್ಪೋರೆಟ್ ಕಂಪನಿಗಳ ಪರವಾಗಿ ಕೆಲಸ ಮಾಡುವಂತಾಗಿದೆ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಮಲಪ್ರಭಾ ಅಚ್ಚುಕಟ್ಟು ಸಮನ್ವಯ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 45ನೇ ರೈತ ಹುತಾತ್ಮ ದಿನಾಚರಣೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಸಾಲದ ಸುಳಿಗೆ ಸಿಲುಕಿರುವ 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿ ಗಡಿಯಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ 700ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದಾರೆ. ಈ ಕುರಿತು ಯಾವುದೇ ಸರ್ಕಾರಗಳು ಶ್ರದ್ಧಾಂಜಲಿ ಸಲ್ಲಿಸಿ ಅಧಿವೇಶನದಲ್ಲಿ ಚರ್ಚೆ ನಡೆಸದಿರುವುದು ಅತ್ಯಂತ ನೋವಿನ ಸಂಗತಿ. ನಮ್ಮ ದೇಶವನ್ನು ಮೋದಿ, ಅಮಿತ್‌ಷಾ, ಅಂಬಾನಿ, ಅದಾನಿ ಸೇರಿ ಕೇವಲ ನಾಲ್ಕು ಜನರು ನಡೆಸುತ್ತಿದ್ದಾರೆ. ಜಾತಿ, ಧರ್ಮಕ್ಕಿಂತ ನಮಗೆ ಅಗತ್ಯ ಸೌಲಭ್ಯಗಳು ಬೇಕು. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ರೈತರ ಬೆಳೆಗಳನ್ನು ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಕಡ್ಡಾಯವಾಗಿ ಖರೀಸುವಂತಾಗಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 10ರಿಂದ 12 ಸಾವಿರ ರೂಪಾಯಿ ಬೆಂಬಲಬೆಲೆ ನೀಡಬೇಕು. ರೈತರ ಸಾಲಮನ್ನಾ ಮಾಡಬೇಕು. ಯೋಗ್ಯ ಬೆಲೆ ನೀಡಿದರೆ ನಮ್ಮ ರೈತರು ಎಣ್ಣೆಕಾಳು ಬೆಳೆದು ಕೊಡುತ್ತಾರೆ. ಆದರೆ, ಅವರಿಗೆ ಅಧಿಕಾರಕ್ಕೆ ಬರುವ ಎಲ್ಲ ಸರ್ಕಾರಗಳಿಂದ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ನರಗುಂದ-ನವಲಗುಂದ ಶಾಶ್ವತ ಬಂಡಾಯದ ನಾಡು ಎಂದು ಗುರುತಿಸಿಕೊಂಡಿವೆ. ಇಲ್ಲಿನ ರೈತರು ನಡೆಸಿದ ಹೋರಾಟಕ್ಕೆ ದೊಡ್ಡ ಇತಿಹಾಸವಿದೆ. ರೈತ ಬಂಡಾಯದಲ್ಲಿ 136 ಅಮಾಯಕ ರೈತರನ್ನು ಬಂಧಿಸಿ 20 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಸಂಘಟನಾತ್ಮಕ ಹೋರಾಟದ ಫಲವಾಗಿ ಎಲ್ಲರನ್ನು ಶಿಕ್ಷೆಯಿಂದ ಪಾರು ಮಾಡಿದ್ದೇವೆ. ನಾನು 5 ಬಾರಿ ಶಾಸಕನಾಗಿ ಆಯ್ಕೆಯಾದರೂ ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಈಗ ಈಡೇರಿದ್ದು ಹೆಮ್ಮೆಯಕರ ಸಂಗತಿ. ಆದರೆ, ಇಂದಿನ ದಿನಗಳಲ್ಲಿ ರಾಜಕೀಯ ಕಲುಷಿತಗೊಂಡಿದೆ. ನಿಯತ್ತು, ನ್ಯಾಯ ಇಲ್ಲದ್ದಕ್ಕೆ ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ರಾಜಕಾರಣಿಗಳಿಗೆ ಬಂದೊದಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಪ್ಪಾಸಾಹೇಬ ಪಾಟೀಲ, ವಿವೇಕ ಯಾವಗಲ್, ರಾಜು ಕಲಾಲ ಮಾತನಾಡಿದರು. ಅಪ್ಪಣಗೌಡ ನಾಯ್ಕರ, ಮಲ್ಲಣ್ಣ ಕೊಳ್ಳೇರಿ, ಪ್ರವೀಣ ಯಾವಗಲ್ಲ್, ದ್ಯಾಮಣ್ಣ ಕಾಡಪ್ಪನವರ, ಆರ್.ಎನ್. ಪಾಟೀಲ, ದ್ಯಾಮಣ್ಣ ಸವದತ್ತಿ, ಗುರುಪಾದಪ್ಪ ಕುರಹಟ್ಟಿ, ಶ್ರೀಕಾಂತಗೌಡ ಪಾಟೀಲ, ಅಪ್ಪಾಜಿ ವಿಜಾಪೂರ, ಬಾಬು ಹಿರೇಹೊಳಿ, ಪ್ರಕಾಶ ಹಡಗಲಿ, ಬಿ.ಐ.ಕಡಕೋಳ ಮುಂತಾದವರಿದ್ದರು.
ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಮಾತನಾಡಿ, ಕುಡಿಯುವ ನೀರಿನ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳ್ಳದಿದ್ದರೂ ಬಿಜೆಪಿಯವರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ದಿ. ಅನಂತಕುಮಾರ ಅವರಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಪ್ರಮುಖ ಕೊಂಡಿಯಾಗಿ ಕಳಸಾ-ಬಂಡೂರಿ ಯೋಜನೆಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.