ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಂಗೀತಕ್ಕೆ ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಬೇಧವಿಲ್ಲ. ನೊಂದ ಜೀವಕ್ಕೆ ಶಾಂತಿ, ನೆಮ್ಮದಿ ಕೊಡುವ ಅಪಾರವಾದ ಶಕ್ತಿ ಸಂಗೀತಕ್ಕಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಪಟ್ಟಣದ ವಾಸು ಗೆಳೆಯರ ಬಳಗದಿಂದ ಏರ್ಪಡಿಸಲಾಗಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಸಂಗೀತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪೋಷಿಸುವ ಮನೋಗುಣ ನಮ್ಮೆಲ್ಲರದ್ದಾಗಬೇಕು. ಲಕ್ಷ್ಮೇಶ್ವರ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತನ್ನದೇ ಆದ ವಿಶೇಷ ಹೆಸರು ಮಾಡಿದೆ. ಅದರಲ್ಲೂ ಗದುಗಿನ ಪುಟ್ಟರಾಜ ಗವಾಯಿಗಳ ಮಠ ಸೇರಿ ನಾಡಿನ ಮಠ ಮಾನ್ಯಗಳು ತ್ರಿವಿಧ ದಾಸೋಹದೊಂದಿಗೆ ಸಂಗೀತ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಂ. ಮಹಾಂತಶಟ್ಟರ ಹಾಗೂ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಂಗೀತ ದೇವರ ಕೊಡುಗೆಯಾಗಿದ್ದು, ಸಂಗೀತಕ್ಕೆ ಎಲ್ಲವನ್ನೂ ಗೆಲ್ಲುವ ಶಕ್ತಿಯಿದೆ. ಮಕ್ಕಳಿಗೆ ಸಂಗೀತ ಕಲೆ ರೂಢಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಬೆಲೆ ಕಟ್ಟಲಾಗದ ಸಂಗೀತ, ಸಂಸ್ಕೃತಿ-ಪರಂಪರೆ ಉಳಿಸಿ-ಬೆಳೆಸುವ ಸಂಪ್ರದಾಯ ನೆಲೆನಿಲ್ಲಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಆನಂದ ಗಡ್ಡದೇವರಮಠ, ಗುರುನಾಥ ದಾನಪ್ಪನವರ, ಮಂಜುನಾಥ ಹೊಗೆಸೊಪ್ಪಿನ ಮಾತನಾಡಿದರು. ಮುಖಂಡರಾದ ಉಮೇಶ ಕರಿಗಾರ, ಶಿವಪ್ರಕಾಶ ಮಹಾಂತಶೆಟ್ಟರ, ಗಿರೀಶ ತಟ್ಟಿ, ಶಿವಯೋಗಿ ಅಂಕಲಕೋಟಿ, ಮಹೇಶ ಲಿಂಬಯ್ಯಸ್ವಾಮಿಮಠ, ಚಂಬಣ್ಣ ಬಾಳಿಕಾಯಿ, ಸಮ್ಮೇದ ಗೋಗಿ, ನಾರಾಯಣಸಾ ಪವಾರ, ರಮೇಶ ನವಲೆ, ರೇಖಾ ವಡ್ಡಟ್ಟಿ, ಗುರುಶಾಂತಯ್ಯ ಸಿಂಧೋಳ್ಳಿಮಠ ಮುಂತಾದವರಿದ್ದರು. ರಮೇಶ ನವಲೆ ಪ್ರಾಸ್ತಾವಿಕ ನುಡಿದರು. ಸ್ನೇಹಾ ಹೊಟ್ಟಿ, ಗಂಗಾಧರ ಮೆಣಸಿನಕಾಯಿ, ಕಿರಣ ನವಲೆ ನಿರೂಪಿಸಿದರು.
ಹಿರಿಯ ಸಂಗೀತ ಕಲಾವಿದರಾದ ಶೀಲಾ ಪಾಟೀಲ, ಅಮರ ಜವಳಿ ಹಾಗೂ ವಾಸು ಬೋಮಲೆ ಸೇರಿ ಸ್ಥಳೀಯ ಕಲಾವಿದರ ಸಂಗೀತ ಸುಧೆ ಪ್ರೇಕ್ಷಕರನ್ನು ಆಕರ್ಷಿಸಿತು. ಕಿರುತೆರೆ ಕಲಾವಿದರಾದ ಮಿಮಿಕ್ರಿ ಗೋಪಿ, ರಾಘವೇಂದ್ರ (ರಾಗಿಣಿ), ಹಾವೇರಿ ಜಿಲ್ಲೆ ದೇವಗಿರಿಯ ಜ್ಯೂ ಪುನೀತ್ ರಾಜಕುಮಾರ ಮುಂತಾದವರಿಂದ ಹಾಸ್ಯ, ಮಿಮಿಕ್ರಿ ಕಾರ್ಯಕ್ರಮಗಳು ನಡೆದವು.