ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 22ರಂದು ಬೆಳಿಗ್ಗೆ 10.30ಕ್ಕೆ ನಗರದ ತೋಂಟದಾರ್ಯ ಮಠದ ಆವರಣದಿಂದ ಗಾಂಧಿ ಸರ್ಕಲ್ ಮಾರ್ಗವಾಗಿ ಪಂಡಿತ ಪುಟ್ಟರಾಜ ಗವಾಯಿಗಳ ಸರ್ಕಲ್, ಹಳೆ ಡಿ.ಸಿ ಆಫೀಸ್, ಮುಳಗುಂದ ನಾಕಾ ಮಾರ್ಗವಾಗಿ ತೆರಳಿ ಜಿಲ್ಲಾಡಳಿತ ಭವನದ ಎದುರು ಬೃಹತ್ ಹೋರಾಟ ನಡೆಸಲಾಗುವುದು ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್.ಕಲ್ಮನಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಸ.ಪ್ರ.ದ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಿ, ಸೇವಾ ಭದ್ರತೆಗೆ ಆಗ್ರಹದ ಜೊತೆಗೆ ಶೈಕ್ಷಣಿಕ ಅರ್ಹತೆ ಹೆಸರಿನ ತಾರತಮ್ಯ ಬಿಟ್ಟು ಏಕರೂಪದ ಕೌನ್ಸೆಲಿಂಗ್ ನಡೆಸಬೇಕು ಎಂದು ಒತ್ತಾಯಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸಹಸ್ರಾರು ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ಪಾದಯಾತ್ರೆಗೆ ತೋಂಟದಾರ್ಯ ಮಠದ ಪೂಜ್ಯ ಶ್ರೀ ಡಾ. ಸಿದ್ದರಾಮಶ್ರೀಗಳು ಹಾಗೂ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಶ್ರೀ ಡಾ. ಕಲ್ಲಯಜ್ಜನವರು ಚಾಲನೆ ನೀಡುವರು ಎಂದು ಡಾ.ಹನುಮಂತಗೌಡ ಆರ್.ಕಲ್ಮನಿ, ಡಾ. ವಿ.ಡಿ. ಮುಳಗುಂದ, ಭಗತ್‌ಸಿಂಗ್ ನವಲೂರಕರ, ವಿಜಯಕುಮಾರ ದೇಸಾಯಿಗೌಡರ, ಡಾ. ಎಂ.ಸೊಪ್ಪಿಮಠ, ಎಂ.ಕೆ. ಜಾಲಿಹಾಳ, ನಾರಾಯಣ ಕರಲ್ವಾಡ ತಿಳಿಸಿದ್ದಾರೆ.