ನವದೆಹಲಿ: ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಗುರುವಾರ ದರ್ಶನ್ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ. ದರ್ಶನ್ ಪರ ವಕೀಲರು ಗೈರಾದ ಕಾರಣ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ.
‘ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು.. ಆದರೆ, ಅವರಿಗೆ ಬೇರೆ ಪ್ರಕರಣದಲ್ಲಿ ಇಂದು ವಾದ ಮಂಡಿಸಬೇಕಿದೆ. ನಿನ್ನೆ ರಾತ್ರಿ ನನಗೆ ಈ ಕೇಸ್ ಬಂತು. ಆದರೆ, ಇಷ್ಟು ಬೇಗ ಕೇಸ್ನ ವಾದ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಒಂದು ಒಂದು ದಿನ ಸಮಯ ಕೇಳಿದ್ದೇನೆ. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಕೊಟ್ಟಿದೆ.
ಹೀಗಾಗಿ, ಈ ಅರ್ಜಿ ವಿಚಾರಣೆ ಗುರುವಾರಕ್ಕೆ (ಜುಲೈ 24) ಮುಂದೂಡಲ್ಪಟ್ಟಿದೆ’ ಎಂದು ದರ್ಶನ್ ಪರ ಹಿರಿಯ ವಕೀಲ ಸಿದ್ದಾರ್ಥ್ ದವೆ ಹೇಳಿಕೆ ನೀಡಿದ್ದಾರೆ. ‘ನಾನು ಬಂಧನದ ಕಾರಣಗಳ ಬಗ್ಗೆ ವಾದ ಮಂಡಿಸುವುದಿಲ್ಲ. ಕೇಸ್ನ ಮೆರಿಟ್ಸ್ ಮೇಲೆ ವಾದ ಮಂಡಿಸುತ್ತೇನೆ’ ಎಂದು ಕೂಡ ಅವರು ಹೇಳಿದ್ದಾರೆ. ಹೀಗಾಗಿ, ದರ್ಶನ್ ಕೇಸ್ನಲ್ಲಿ ಗುರುವಾರ ತೀರ್ಪು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.



