ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಹೆಚ್ಚಿನವರು ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇನ್ನಿತ್ತರ ಆಪ್ಲಿಕೇಶನ್ಗಳನ್ನು ಹಣ ಪಾವತಿಗಾಗಿ ಅವಲಂಬಿಸಿಕೊಂಡಿದ್ದಾರೆ. ಹೀಗಿರುವಾಗ ವಾಣಿಜ್ಯ ತೆರಿಗೆ ಇಲಾಖೆಯು ಯುಪಿಐ ಮೂಲಕ ವಹಿವಾಟು ಮಾಡುವ ಸಣ್ಣ ವ್ಯಾಪಾರಸ್ಥರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿದೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, GST ನಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ CGST ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಜಿ ಎಸ್ ಟಿ ಕೌನ್ಸಿಲ್ ನಲ್ಲಿ ಯಾವುದೇ ತೀರ್ಮಾನ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3 ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ. ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ, ಅವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.



