ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿದ್ದು, ನಾಲ್ಕು ವರ್ಷದ ಬಾಲಕ ಸುದೀಪ್ ಹಾಗೂ ಇನ್ನಿಬ್ಬರು ಗಾಯಗೊಂಡ ದಾರುಣ ಘಟನೆ ಮಂಗಳವಾರ ಸಂಜೆ ಜರುಗಿದೆ.
ಮೃತನನ್ನು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಇನಾಂ ದ್ಯಾವನಕೊಪ್ಪ ಗ್ರಾಮದ ನಿವಾಸಿ ಗಣೇಶ್ ಸೋಮಪ್ಪ ನ್ಯಾರ್ಲಘಂಟಿ(32) ಎಂದು ಗುರುತಿಸಲಾಗಿದೆ.
ಇವರು ಕೊಪ್ಪಳ ಜಿಲ್ಲೆಯ ಕಲಕೇರಿ ಗ್ರಾಮಕ್ಕೆ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದರು. ಹಳ್ಳಿಗುಡಿ ಸಮೀಪ ಬೈಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಪ್ಪತ್ತು ಅಡಿಗಳಷ್ಟು ಬೈಕ್ ಸವಾರ ಗಣೇಶ್ ಹಾರಿ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ಕು ವರ್ಷದ ಸುದೀಪ್ ಹಾಗೂ ಗಣೇಶ್‌ನ ತಂದೆ ಸೋಮಪ್ಪ,ಪತ್ನಿ ಮಹಾದೇವಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಕುಸಗಲ್ಲ ಹಾಗೂ ಸಿಬ್ಬಂದಿ ಮಹೇಶ್ ಗೊಳಗೊಳಕಿ, ಬಸವರಾಜ್ ಬಣಕಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.