ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರೈತನ ಮಗನೊಬ್ಬ ತನ್ನ ಸತತ ಪರಿಶ್ರಮ ಮತ್ತು ಶಿಸ್ತಿನ ಓದಿನಿಂದ ಸಿಎ ಪಾಸಾದುದು ನಮಗೆಲ್ಲ ಸಂತೋಷದ ವಿಷಯ. ಇಡೀ ಗಜೇಂದ್ರಗಡ ತಾಲೂಕು ಹೆಮ್ಮೆ ಪಡುವಂತಹ ಸಾಧನೆ ಮಾಡಿರುವ ಅಜಯ ದೊಡ್ಡಮೇಟಿಗೆ ಎಲ್ಲರ ಪರವಾಗಿ ಅಭಿನಂದನೆಗಳು ಎಂದು ಗಜೇಂದ್ರಗಡ ಚನ್ನು ಪಾಟೀಲ ಫೌಂಡೇಶನ್ ಅಧ್ಯಕ್ಷ ಉಮೇಶ ಪಾಟೀಲ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಸುಭಾಸ ದೊಡ್ಡಮೇಟಿಯವರ ಮನೆಯಲ್ಲಿ ನಡೆದ ಅಜಯ ದೊಡ್ಡಮೇಟಿ ಅಭಿನಂದನಾ ಸಮಾರಂಭದಲ್ಲಿ, ಫೌಂಡೇಷನ್ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಇಂತಹ ಸಾಧನೆ ಮಾಡುವುದು ಅಪರೂಪ. ಇಲ್ಲಿ ಇಂತಹ ಸಾಧನೆಗೆ ಅನುಕೂಲತೆಗಳು ಇರುವುದಿಲ್ಲ. ಆದಾಗ್ಯೂ ಅಜಯ ಛಲ ಬಿಡದ ತ್ರಿವಿಕ್ರಮನಂತೆ ಈ ಸಾಧನೆಗೈದಿರುವುದಕ್ಕೆ ಚನ್ನು ಪಾಟೀಲ ಫೌಂಡೇಶನ್ ನಿಂದ ಅವರನ್ನು ಸನ್ಮಾನಿಸಿ ಗೌರವಿಸುತ್ತಿದ್ದೇವೆ. ಅಜಯ ತಾನು ಸಾಧಿಸಿದ ಸಂಗತಿಯನ್ನು ಇತರರಿಗೂ ಮಾರ್ಗದರ್ಶನ ಮಾಡಬೇಕು. ಅತ್ಯುನ್ನತ ಪರೀಕ್ಷೆ ಪಾಸಾಗುವುದು ಅಷ್ಟು ಸುಲಭದ ಮಾತಲ್ಲ. ತನ್ನ ಗ್ರಾಮವನ್ನು ಮರೆಯದೆ ಆತ ಗ್ರಾಮಕ್ಕೆ ಏನೆಲ್ಲವನ್ನೂ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಬೇಕೆಂದು ಉಮೇಶ ಹೇಳಿದರು.
ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಅಜಯ ಸಂಘರ್ಷದ ಜೀವನ ಎದುರಿಸಿ ಸಿಎ ಉತ್ತೀರ್ಣನಾಗಿದ್ದಾನೆ. ಇದು ಎಲ್ಲ ಗ್ರಾಮೀಣ ಯುವಕ-ಯುವತಿಯರಿಗೆ ಮಾದರಿಯಾಗಬೇಕು. ಅವರೂ ಸಹ ಇವನಂತೆ ದೊಡ್ಡ ಕನಸನ್ನು ಕಟ್ಟಿಕೊಂಡು ಅದನ್ನು ನನಸು ಮಾಡಲು ಮುಂದಾಗಬೇಕೆಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜಯ ದೊಡ್ಡಮೇಟಿ, ನಿಮ್ಮ ಈ ಪ್ರೀತಿ, ಅಭಿಮಾನವನ್ನು ಎಂದಿಗೂ ಮರೆಯುವುದಿಲ್ಲ. ಎಂದಿಗೂ ನಾನು ನಿಮ್ಮ ಅಜಯನೇ ಆಗಿರುತ್ತೇನೆ ಎಂದರು.
ಸಭೆಯನ್ನುದ್ದೇಶಿಸಿ ಉಮೇಶ ಆರ್. ಪಾಟೀಲ, ಕಳಕಪ್ಪ ಕರಮುಡಿ, ಡಾ. ಅಂದಪ್ಪ ನರೇಗಲ್ಲ ಮುಂತಾದವರು ಮಾತನಾಡಿದರು. ಶಿವಕುಮಾರ ದಡ್ಡೂರ ನಿರೂಪಿಸಿದರು. ಈ ಸಂದರ್ಭದಲ್ಲಿ ಗುರುಲಿಂಗಯ್ಯ ಮಂಟಯ್ಯನಮಠ, ಉಮೇಶ ಮೇಟಿ, ಮಹಾದೇವಪ್ಪ ಮೆಣಸಿಗಿ, ಚನ್ನಬಸಪ್ಪ ಅರಹುಣಸಿ, ವೀರಣ್ಣ ಗುಜಮಾಗಡಿ, ಶರಣಪ್ಪ ತಳವಾರ, ಹನುಮಂತತಳವಾರ, ಸೊಲಬಪ್ಪ ಮುಗಳಿ, ಶಿವನಾಗಪ್ಪ ದೊಡ್ಡಮೇಟಿ, ವಿರುಪಾಕ್ಷಪ್ಪ ಅಂಗಡಿ, ರಮೇಶ ಮಾಸ್ತಿ, ಕಳಕಪ್ಪ ಸರ್ವಿ, ಸಂಗಮೇಶ ಮೆಣಸಿಗಿ, ಮಲ್ಲಯ್ಯ ಗುಂಡಗೋಪುರಮಠ, ದೊಡ್ಡಮೇಟಿ ಕುಟುಂಬದ ಪರಿವಾರದವರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಅಜಯನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಆತ ಎಷ್ಟೇ ದೊಡ್ಡ ಹುದ್ದೆಗೆ ತಲುಪಿದರೂ ತನ್ನ ತಂದೆ-ತಾಯಿ, ಗ್ರಾಮ ಮತ್ತು ಬಂಧುಗಳನ್ನು ಮರೆಯದಿರಲಿ. ಅಹಂಕಾರ ಎಂದಿಗೂ ಅವನ ಬಳಿ ಸುಳಿಯದಿರಲಿ. ಅವನ ಸಾಧನೆಗೆ ತಕ್ಕಂತೆ ಅವನಿಗೆ ಉತ್ತಮ ಹುದ್ದೆ ದೊರಕಲಿ ಎಂದು ಹಾರೈಸಿದರು.