ಬೆಳಗಾವಿ:- ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಮಧ್ಯಾಹ್ನ ಬಿಸಿಯೂಟ ಸೇವಿಸಿದ 30ಕ್ಕೂ ಅಧಿಕ ಮಕ್ಕಳು ತೀವ್ರ ಅಸ್ವಸ್ಥರಾಗಿರುವ ಆಘಾತಕಾರಿ ಘಟನೆ ಜರುಗಿದೆ.
ನಿನ್ನೆ ಮಧ್ಯಾಹ್ನ ಒಟ್ಟಿಗೆ ಬಿಸಿಯೂಟ ಸೇವಿಸಿದ್ದ ಮಕ್ಕಳು. ಊಟದ ಬಳಿಕ ಹೊಟ್ಟೆ ನೋವು, ವಾಂತಿ, ಮತ್ತು ತಲೆಸುತ್ತಿನಂತಹ ಲಕ್ಷಣಗಳು ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥ ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 24 ಮಕ್ಕಳಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದ್ದು, ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವುದೇ ಮಕ್ಕಳ ಆರೋಗ್ಯದಲ್ಲಿ ಏರುಪೇರಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಈಶ್ವರ ಗಡಾದಿ ಮತ್ತು ಡಿಡಿಪಿಐ ಲೀಲಾವತಿ ಹಿರೇಮಠ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಮಕ್ಕಳ ಆರೋಗ್ಯ ಸ್ಥಿರವಾಗಿದೆ, ಯಾವುದೇ ಗಂಭೀರ ಸಮಸ್ಯೆ ಇಲ್ಲ. ಚಿಕಿತ್ಸೆಯಿಂದ ಎಲ್ಲರೂ ಗುಣಮುಖರಾಗುತ್ತಿದ್ದಾರೆ’ ಎಂದು ಡಿಡಿಪಿಐ ಲೀಲಾವತಿ ಹಿರೇಮಠ ಹೇಳಿದ್ದಾರೆ.
ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಸಿಯೂಟದ ಗುಣಮಟ್ಟ, ಆಹಾರ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಈ ಘಟನೆಯಿಂದ ಶಾಲಾ ಆಡಳಿತ ಮತ್ತು ಪೋಷಕರಲ್ಲಿ ಆತಂಕ ಹೆಚ್ಚಿದೆ.