ಬೆಂಗಳೂರು:- ಮ್ಯಾನ್ ಹೋಲ್ಗೆ ಇಳಿದಿದ್ದ ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ.
ನಾಗರಾಜ್, ಆಂಥೋನಿ, ದೇವರಾಜ್ ಮತ್ತು ಆನಂದ್ ಬಂಧಿತರು. ಜುಲೈ 21 ರಂದು ಮ್ಯಾನ್ ಹೋಲ್ಗೆ ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನಪ್ಪಿದ್ದ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆ ವ್ಯಕ್ತಿಯ ಸಾವಿಗೆ ಕಾರಣವಾದವರು ಈ ಮೇಲಿನ ನಾಲ್ಕು ಜನರು. ಸಾವಿರ ರೂ. ಹಣ ಕೊಟ್ಟು ಮ್ಯಾನ್ ಹೋಲ್ಗೆ ಇಳಿಸಿ ಆ ಸಾವಿಗೆ ಕಾರಣವಾದವರು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.
ಬಂಧಿತ ನಾಲ್ವರು ಆರೋಪಿಗಳು 1500 ನೀಡಿ ಪುಟ್ಟಸ್ವಾಮಿಯನ್ನ ಮ್ಯಾನ್ ಹೋಲ್ಗೆ ಇಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ಲೀನ್ ಮಾಡಲು ಹೇಳಿದ್ದರು. ಆದರೆ ಸುಮಾರು ಅರ್ಧ ಗಂಟೆ ಒಳಗಿದ್ದ ಪುಟ್ಟಸ್ವಾಮಿಗೆ ಉಸಿರುಗಟ್ಟಿದಂತಾಗಿ ಹೊರಬಂದಿದ್ದರು. ಬಳಿಕ ಮನೆಯಲ್ಲಿ ಮಲಗಿದ್ದ ಪುಟ್ಟಸ್ವಾಮಿ ಬೆಳಗ್ಗೆ ಆಗುವಷ್ಟರಲ್ಲಿ ಮೃತಪಟ್ಟಿದ್ದಾರೆ. ಇದು ಕಾನೂನು ಉಲ್ಲಂಘನೆ ಕೆಲಸದ ಜೊತೆಗೆ ವ್ಯಕ್ತಿಯೊಬ್ಬನ ಸಾವಿಗೂ ಕಾರಣವಾಗಿತ್ತು. ಹೀಗಾಗಿ ನಾಲ್ವರನ್ನೂ ಬಂಧಿಸಲಾಗಿದೆ.