ಬಸಾಪೂರ ಕೆರೆ ತೆರವಿಗೆ ಹೋರಾಟ ಯಶಸ್ವಿ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಎದುರು ಜನಜಾನುವಾರು ಹೋರಾಟ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತದ ಅನುಮತಿ ಸಿಗದ ಹೊರತಾಗಿಯೂ ಜಾನುವಾರುಗಳನ್ನು ಬಲ್ಡೋಟಾ ಒಳಗಡೆ ಕಳುಹಿಸುವ ಮೂಲಕ ಹೋರಾಟ ತೀವ್ರಸ್ವರೂಪ ಪಡೆದುಕೊಂಡಿತು.

Advertisement

ತಾಲೂಕಿನ ಬಸಾಪೂರ ಗ್ರಾಮದ ಸ.ನಂ. 143ರ 44.35 ಎಕರೆ ವಿಸ್ತೀರ್ಣದ ಸಾರ್ವಜನಿಕ ಕೆರೆಯನ್ನು ಅತಿಕ್ರಮಿಸಿ, ಕಂಪೌಂಡ್ ನಿರ್ಮಿಸಿ, ರಸ್ತೆ ಬಂದ್ ಮಾಡಿರುವ ಬಲ್ದೋಟಾ ಕಂಪನಿ ಮೇಲೆ ಕ್ರಮ ಜರುಗಿಸಿ, ಕಂಪೌಂಡ್ ತೆರವುಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ, ತೆರವುಗೊಳಿಸದ ಜಿಲ್ಲಾಡಳಿತದ ವಿರುದ್ಧ ಜನಜಾನುವಾರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಬಲ್ದೋಟಾ ಕಂಪನಿ ಆರಂಭದಿಂದಲೂ ಆಕ್ರಮಣಕಾರಿ ನೀತಿಯನ್ನು ಅನುಸರಿಸಿ ರೈತರ ಮೇಲೆ ದೌರ್ಜನ್ಯದಿಂದ ಭೂಮಿ ವಶಪಡಿಸಿಕೊಂಡಿದೆ. ಹಿಂದಿನ ಕೆಲವು ಅದಿಕಾರಿಗಳು ಸಹ ಅದಕ್ಕೆ ಸಾಥ್ ನೀಡಿದ್ದು, ಜನರ ಪ್ರಾಣ ಮತ್ತು ಬದುಕು ಮುಖ್ಯವಾಗಿರುವ ಕಾರಣ ಬೆಲೆಬಾಳುವ ಹಾಗೂ ಜನ-ಜಾನುವಾರುಗಳಿಗೆ ಅವಶ್ಯವಿರುವ ಕೆರೆಯನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವಂತೆ ಉಚ್ಛ ನ್ಯಾಯಾಲಯದ ತೀರ್ಪು ಇದ್ದಾಗ್ಯೂ ಸಹ ತೆರವುಗೊಳಿಸದಿರುವ ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳು, ಸಚಿವ/ಶಾಸಕರು ಕೆರೆ ವೀಕ್ಷಣೆಗೆ ಮತ್ತು ಬಾಧಿತ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾಡಳಿತದ ಪರವಾಗಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಂಟಿ ಕ್ರಿಯಾ ವೇದಿಕೆ ಮುಖಂಡರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮಂಜುನಾಥ ಜಿ.ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಎಸ್.ಎ. ಗಫಾರ್, ಭೀಮಸೇನ ಕಲಕೇರಿ, ಕನಕಪ್ಪ ಪೂಜಾರ, ಲಿಂಗರಾಜ ನವಲಿ, ಗಾಳೆಪ್ಪ ಮುಂಗೋಲಿ, ಮಂಗಳೇಶ ರಾಠೋಡ, ಕಾಶಪ್ಪ ಚಲುವಾದಿ, ಶರಣು ಶೆಟ್ಟರ್, ಮಂಜುನಾಥ ಕವಲೂರ, ಯಮನೂರಪ್ಪ ಹಾಲಳ್ಳಿ, ಪ್ರಕಾಶ ಎಂ, ಭೀಮಪ್ಪ, ಸುಂಕಪ್ಪ ಮೀಸಿ, ಶಿವಪ್ಪ ಹಡಪದ, ಹನುಮೇಶ, ಭರಮಪ್ಪ, ಮಾರುತಿ, ಯಮನೂರಪ್ಪ, ಮೂಕಪ್ಪ ಬಸಾಪೂರ ಇತರರು ಇದ್ದರು.

ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಸುಮಾರು 10-15 ಎಕರೆ ಕೆರೆಯನ್ನು ಮುಚ್ಚಿ ರಸ್ತೆ ನಿರ್ಮಿಸಿರುವುದನ್ನು ತೆರವುಗೊಳಿಸಬೇಕೆಂದು, ಕೆರೆ ಸರ್ವೆ ಮಾಡಿ, ಹದ್ದುಬಸ್ತ್ ಮಾಡಿ ತಾವೇ ನಿರ್ವಹಣೆ ಮಾಡಬೇಕೆಂದು, ಕಂಪನಿ ಜೊತೆ ಮಿಲಾಪಿಯಾಗಿ ಸಾರ್ವಜನಿಕರ ಹಕ್ಕನ್ನು ದಿಕ್ಕರಿಸುವ ವರದಿ ನೀಡಿರುವ ನಿಮ್ಮ ಅಧೀನ ಅಧಿಕಾರಿಗಳ ಮೇಲೆ ಉನ್ನತಾಧಿಕಾರಿಗಳ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here