ಮೈಸೂರು:- 2025ರ ಮೈಸೂರು ದಸರಾಗೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲಾ ತಯಾರಿಗಳು ಭರದಿಂದ ಸಾಗಿದೆ.
ಅದರ ಭಾಗವಾಗಿ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ 2025ನೇ ಮೊದಲ ಹಂತದ ಗಜಪಡೆಯ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.
ಈ ಬಾರಿಯು ಗಜಪಡೆಯ ಕ್ಯಾಪ್ಟನ್ ಆಗಿ ಅಭಿಮನ್ಯು ಹೊರಹೊಮ್ಮಿದ್ದಾನೆ. ಅರಣ್ಯ ಇಲಾಖೆಯು, ದಸರಾ ಗಜ ಪಡೆಯನ್ನು ಕಟ್ಟುವುದಕ್ಕೆ ಕಳೆದ ಒಂದು ತಿಂಗಳಿನಿಂದ ಹುಡುಕಾಟ ನಡೆಸಿದ್ದು, ಕೊನೆಗೂ ಮೊದಲ ಹಂತದಲ್ಲಿ 9 ಆನೆಗಳ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿ ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಮೊದಲ ಹಂತದ ಗಜಪಡೆಯನ್ನು ಆಗಸ್ಟ್ 4 ರಂದು ಹುಣಸೂರು ಬಳಿಯ ವೀರನಹೊಸಳ್ಳಿಯಿಂದ ವಿದ್ಯುಕ್ತವಾಗಿ ಗಜಪಯಣಕ್ಕೆ ಚಾಲನೆ ನೀಡಿ ಮೈಸೂರಿಗೆ ತರಲಾಗುವುದು.
ಅದರಂತೆ ಈ ಬಾರಿಯ ಜಂಬೂಸವಾರಿಯಲ್ಲಿ ಮತ್ತೀಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಗಂಡಾನೆಗಳು ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ ಲಕ್ಷ್ಮೀ (53) ಹೆಣ್ಣಾನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ.