ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅರಿತುಕೊಳ್ಳುವಲ್ಲಿ ಹಾಗೂ ಅದರ ಸದುಪಯೋಗ ಪಡೆದುಕೊಳ್ಳುವಲ್ಲಿ ಶಾಲಾ ಸಂಸತ್ತು ಅತ್ಯಗತ್ಯ ಎಂದು ಬೆಟಗೇರಿಯ ಎಸ್.ಎಸ್.ಕೆ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಚೇರಮನ್ ಜಿ.ವಿ. ಬಸವಾ ಅಭಿಪ್ರಾಯಪಟ್ಟರು.
ಅವರು ಬೆಟಗೇರಿಯ ಎಸ್.ಎಸ್.ಕೆ ಜಗದಂಬಾ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಶಾಲಾ ಮಕ್ಕಳ ಸಂಸತ್ತಿನ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮಾತನಾಡಿದರು.
ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿ ಅಧ್ಯಕ್ಷ ಲೋಕನಾಥ ಕಬಾಡಿ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ಅಗತ್ಯತೆಯಿದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಪಂಚ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ದತ್ತು ಪವಾರ ಮಾತನಾಡಿ, ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನೂ ಪಾಲುದಾರರನ್ನಾಗಿ ಮಾಡುವುದು ಶಾಲಾ ಸಂಸತ್ತಿನ ರಚನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಶಾಲಾ ಸಂಸತ್ತಿಗೆ ಆಯ್ಕೆಯಾದ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಬೆಟಗೇರಿ ಎಸ್.ಎಸ್.ಕೆ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯರು ಹಾಗೂ ಎಸ್.ಎಸ್.ಕೆ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ಮಕ್ಕಳು ಹಾಜರಿದ್ದರು.