ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ದೇಶದ ಸ್ವಾತಂತ್ರ್ಯಕ್ಕಾಗಿ ದುಡಿಯುವ ವರ್ಗವನ್ನು ಸಂಘಟಿಸಿ ಮುನ್ನಡೆಸಿದ ಇತಿಹಾಸ ಭಾರತ ಕಮ್ಯುನಿಸ್ಟ್ ಪಕ್ಷಕ್ಕಿದೆ ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ರೇಣುಕಮ್ಮ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿಯಲ್ಲಿ ಗುರುವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ 8ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ನಂತರ ದುಡಿಯುವ ವರ್ಗದ ನ್ಯಾಯಸಮ್ಮತ ಹಕ್ಕುಗಳಿಗಾಗಿ ಕಮ್ಯುನಿಸ್ಟ್ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಆದರೆ ಇಂದಿನ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಎಚ್.ಎಂ. ಸಂತೋಷ್, ಪ್ರಸ್ತುತ ನವ ವಸಾಹತುಶಾಹಿಯ ಜಾಗತೀಕರಣ ನೀತಿಗಳ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ ನಿರಂತರವಾಗಿ ಹೋರಾಡುತ್ತಿದೆ. ಶ್ರಮಿಕ ವರ್ಗದಲ್ಲಿ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಾಗ ತಮ್ಮ ಶೋಷಣೆಯಿಂದ ಮುಕ್ತರಾಗುತ್ತಾರೆ. ಪಕ್ಷ ಹಾಗೂ ಪಕ್ಷದ ಸಾಮೂಹಿಕ ಸಂಘಟನೆಗಳು ಜನರ ಪರವಾಗಿ ಹೋರಾಟ ಮಾಡುವ ಆಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೊಸಳ್ಳಿ ಮಲ್ಲೇಶ್ ಮಾತನಾಡಿ, ಹರಪನಹಳ್ಳಿ ತಾಲೂಕಿನಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಕಮ್ಯುನಿಸ್ಟ್ ನಾಯಕರಿಗೆ ಒಳನೋಟ ಮತ್ತು ಮುನ್ನೋಟಗಳ ಬಗ್ಗೆ ಅರಿವಿರುವ ಕಾರಣ ಶ್ರಮಿಕರ ಧ್ವನಿಯಾಗಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಮಂಡಳಿ ಸದಸ್ಯನರನ್ನು ಆಯ್ಕೆಮಾಡಲಾಯಿತು. ಕಾರ್ಯದರ್ಶಿಯಾಗಿ ರಮೇಶ್ ನಾಯ್ಕ ಹಾಗೂ ಸಹ ಕಾರ್ಯದರ್ಶಿಯಾಗಿ ಬಳಿಗನೂರು ಕೊಟ್ರೇಶ್ ಮತ್ತು ಹಾವೇರಿ ದೊಡ್ಡಬಸಪ್ಪ, ಖಜಾಂಚಿಯಾಗಿ ಪುಷ್ಪ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಹನುಮಂತಪ್ಪ, ರಮೇಶ್‌ನಾಯ್ಕ, ಬಳಿಗನೂರು ಕೊಟ್ರೇಶ್, ಪುಷ್ಟ, ದೊಡ್ಡಬಸವರಾಜ್ ಉಪಸ್ಥಿತರಿದ್ದರು.


