ವಿಜಯಸಾಕ್ಷಿ ಸುದ್ದಿ, ರೋಣ: ಸರಕಾರ ಶಾಲಾ ವಿದ್ಯಾರ್ಥಿನಿಯರಿಗೆ `ಶುಚಿ’ ಸ್ಯಾನಿಟರಿ ಪ್ಯಾಡ್‌ಗಳನ್ನು ಪೂರೈಕೆ ಮಾಡುತ್ತಿದೆ. ಈ ಯೋಜನೆಯ ಲಾಭ ಹೆಣ್ಣುಮಕ್ಕಳಿಗೆ ತಲುಪುತ್ತಿದೆಯಾ ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೇ ಸಮರ್ಪಕ ಮಾಹಿತಿಯಿಲ್ಲ ಎಂದು ತಾ.ಪಂ ಆಡಳಿತಾಧಿಕಾರಿ ಡಾ. ನಂದಾ ಹನಮರೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ತಾ.ಪಂ ಆಡಳಿತಾಧಿಕಾರಿ ಡಾ. ನಂದಾ ಹನಮನರೆಟ್ಟಿರವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಡಾ. ಬಿ.ಎಸ್.ಭಜಂತ್ರಿಯವರನ್ನು ಪ್ರಶ್ನಿಸಿದಾಗ, ಈಗ ಆರೋಗ್ಯ ಇಲಾಖೆಯಿಂದ ಸರಬರಾಜು ಆಗುತ್ತಿಲ್ಲ. ಬದಲಾಗಿ ಶಾಲೆಗಳಿಗೆ ನೇರವಾಗಿ ಹೋಗುತ್ತಿವೆ ಎಂದರು. ಆಗ ಆಡಳಿತಾಧಿಕಾರಿಗಳು ಶಿಕ್ಷಣ ಇಲಾಖೆಯ ಬಿಆರ್‌ಸಿ ಫಣಿಬಂದರನ್ನು ಪ್ರಶ್ನಿಸಿದರೆ ಅವರ ಬಳಿ ಮಾಹಿತಿ ಇಲ್ಲದಿರುವುದನ್ನು ಕಂಡು ಅಸಮಾಧಾನಗೊಂಡರು.
ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ `ಶುಚಿ’ ಉತ್ತಮ ಯೋಜನೆಯಾಗಿದ್ದು, ನಿಮ್ಮ ಬಳಿಯೇ ಮಾಹಿತಿಯಿಲ್ಲ ಅಂದರೆ ಸರಿಯಲ್ಲ. ಮುಖ್ಯ ಶಿಕ್ಷಕರಿಂದ ಅಗತ್ಯ ಮಾಹಿತಿ ಪಡೆದುಕೊಂಡು ನಮಗೆ ವಿವರಿಸಿ ಎಂದು ಸೂಚಿಸಿದರು.
ಅಬಕಾರಿ ಇಲಾಖೆಯ ನಿರೀಕ್ಷಕರು ಸಭೆಗೆ ಬಾರದೆ ತಮ್ಮ ಸಿಬ್ಬಂದಿಯನ್ನು ಸಾಮಾನ್ಯ ಸಭೆಗೆ ಕಳುಹಿಸಿದ್ದರು. ಸಿಬ್ಬಂದಿ ವಿರುದ್ಧ ಸಿಟ್ಟಾದ ಆಡಳಿತಾಧಿಕಾರಿಗಳು, ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಬರಲಿಲ್ಲ ಅಂದರೆ ಏನರ್ಥ, ನೀವು ವರದಿ ಒಪ್ಪಿಸುವುದು ಬೇಡ ಎಂದು ಸಿಬ್ಬಂದಿಯನ್ನು ಹೊರಗೆ ಕಳುಹಿಸಿ, ಅಬಕಾರಿ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ತಾ.ಪಂ ಇಒ ಚಂದ್ರಶೇಖರ ಕಂದಕೂರರಿಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ಸಮಸ್ಯೆ ಬಿಟ್ಟರೆ ಮತ್ತೇನೂ ಇಲ್ಲ ಎಂದು ಸಿಡಿಪಿಒ ಶಿವಗಂಗಮ್ಮ ಸಭೆಗೆ ವಿವರಿಸಿದರು. ಆಗ ಆಡಳಿತಾಧಿಕಾರಿಗಳು ಯಾವ ಗ್ರಾಮ, ಎಂತಹ ಸಮಸ್ಯೆ, ಎಷ್ಟು ಕೇಂದ್ರಗಳು ಎನ್ನುವ ನಿಖರವಾದ ಮಾಹಿತಿ ನಿಡಬೇಕು. ಅಂದಾಗ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಶನಿವಾರ ನನಗೆ ಅಗತ್ಯ ಮತ್ತು ಪರಿಪೂರ್ಣ ಮಾಹಿತಿಯನ್ನು ಒದಗಿಸಿ ಎಂದರು.
ನAತರ ಅವರು ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದರು. ತಾ.ಪಂ ಇಒ ಚಂದ್ರಶೇಖರ ಕಂದಕೂರ, ಯೋಜನಾ ನಿರ್ದೇಶಕ ಸಿ.ಎಸ್. ನಿಲಗುಂದ ಉಪಸ್ಥಿತರಿದ್ದರು.
ಮುಖ್ಯ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ದೂರವಾಣಿ ಕರೆ ಮಾಡಿ ಸಭೆಗೆ ಆಹ್ವಾನಿಸಿದರೂ ಸಹ ಬಹುತೇಕ ಅಧಿಕಾರಿಗಳು ಸಾಮಾನ್ಯ ಸಭೆಗೆ ಆಗಮಿಸಲಿಲ್ಲ. ಅಂತವರ ವಿರುದ್ಧ ನೋಟಿಸ್ ಜಾರಿ ಮಾಡಿ, ಜಿಲ್ಲಾಧಿಕಾರಿ, ಜಿಲ್ಲಾ ಮುಖ್ಯಕಾರ್ಯನಿರ್ವಾಕ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸುತ್ತೇನೆ ಎಂದು ಆಡಳಿತಾಧಿಕಾರಿ ಡಾ. ನಂದಾ ಹನಮನರೆಟ್ಟಿ ಹೇಳಿದರು.


