ಕೃಷಿ ಪ್ರಾಧಾನ್ಯತೆಯ ವಿಮರ್ಶೆಯಾಗಲಿ

0
Spread the love

ಕಳೆದ 12 ವರ್ಷಗಳಲ್ಲಿ ದೇಶಾದ್ಯಂತ ಲೆಕ್ಕವಿಲ್ಲದಷ್ಟು ರಸ್ತೆ ಹಾಗೂ ರೈಲ್ವೆ ಕಾಮಗಾರಿಗಳು ನಡೆದದ್ದು ನಮ್ಮೆಲ್ಲರ ಕಣ್ಣು ಮುಂದೆ ಇದೆ. ಇವುಗಳು ದೇಶವೆಂಬ ದೇಹದ ನರನಾಡಿಗಳಾದರೆ, ಕೃಷಿ ಉತ್ಪನ್ನ ಎಂಬುದು ಈ ನರನಾಡಿಗಳಿಗೆ ಶಕ್ತಿ ತುಂಬುವ ಚೇತನದಂತೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತ ದೇಶದ ಬೆನ್ನೆಲುಬಿನಂತೆ. ಬೆನ್ನೆಲಬು ಗಟ್ಟಿಯಾಗಿದ್ದರೆ ಮಾತ್ರ ದೇಶ ಗಟ್ಟಿಯಾಗಿರಲು ಸಾಧ್ಯ.

Advertisement

ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ರೈತರೊಂದಿಗೆ ಕೃಷಿ ಚಟುವಟಿಕೆಗಳು ನಡದರೆ ಹೇಗೆ ಎಂಬುದೊಂದು ಚಿಂತನೆ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ನಾವು ಕೃಷಿಗೆ ಅದೆಷ್ಟು ಪ್ರಾಧಾನ್ಯತೆ ಕೊಟ್ಟಿದ್ದೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಹೇರಳವಾದ ಫಲವತ್ತಾದ ಭೂಮಿ, ತುಂಬಿ ಹರಿಯುವ ಹೊಳೆ-ಹಳ್ಳಗಳಂಥ ಸಂಪನ್ಮೂಲಗಳಿದ್ದರೂ ಅವುಗಳ ಸದ್ಭಳಕೆ ಆಗುತ್ತಿಲ್ಲ ಎನ್ನುವುದು ನೋವಿನ ಸಂಗತಿ.

ಹೆಚ್ಚುತ್ತಿರುವ ಔದ್ಯೋಗಿಕರಣ ಹಾಗೂ ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚಿ ಮಳೆ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ ಎಂದು ಹಲವಾರು ತಜ್ಞರ ಅಭಿಪ್ರಾಯ. ಹಾಗಾದರೆ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ, ಖಂಡಿತ ಇದೆ. ಪರಿಸರ ನಾಶವನ್ನು ತಡೆಗಟ್ಟುವುದು, ಹೊಳೆ-ಹಳ್ಳಗಳ ನೀರನ್ನು ಸಮರ್ಪಕವಾಗಿ ಬಳಸುವುದು. ಈ ಎರಡೂ ದಡಗಳನ್ನು ಸೇರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ರೈತರ ಸಹಭಾಗೀತ್ವದಲ್ಲಿ ಉಳುಮೆ ಮಾಡುವ ನೇತೃತ್ವ ವಹಿಸಬೇಕು. ಉತ್ಸಾಹಿ ರೈತರನ್ನು ಬಳಸಿಕೊಂಡು ಸೂಕ್ತ ಸಂಭಾವನೆಯನ್ನೂ ನೀಡಬೇಕು.

ಪರಂಪರಾಗತವಾಗಿ ಬಂದ ಕೃಷಿ ಪದ್ಧತಿ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಆಧುನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಣ್ಣ ಹಿಡುವಳಿದಾರರಿಗೆ ಸಾಧ್ಯವಾಗುತ್ತಿಲ್ಲ. ಕಾರಣ, ಅದಕ್ಕೆ ತಗಲಬಹುದಾದ ವೆಚ್ಚ. ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ಕೃಷಿ ಚಟುವಟಿಕೆಗಳು ನಡೆದದ್ದೇ ಆದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯ.

ಶಿಕ್ಷಣದ ಮಹತ್ವ ಅರಿತ ರೈತ ತನ್ನ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸುತ್ತಾನೆ. ವಿದ್ಯಾವಂತರಾದ ಮಕ್ಕಳು ನೌಕರಿಗಾಗಿ ಮಹಾನಗರಗಳಿಗೆ ವಲಸೆ ಹೋಗುವುದು ಅನಿವಾರ್ಯ. ಹಳ್ಳಿಯಲ್ಲಿ ಉಳಿದ ಯುವಕರು ಬಿಟ್ಟಿ ಭಾಗ್ಯಗಳಂಥ ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ದುಡಿದು ತಿನ್ನಬೇಕೆನ್ನುವ ಅವಶ್ಯಕತೆಯೇ ಇಲ್ಲದಂತಾಗಿದೆ. ವಾರದಲ್ಲಿ 2-3 ದಿನ ದುಡಿದರೆ ಸಾಕು ಉಪಜೀವನ ಸಾಗಿಸಬಹುದು. ಎಂಬ ಭಾವ ದೂರಾಗಬೇಕು. ವಿದ್ಯಾವಂತ ಯುವಕರು ಹಳ್ಳಿಯಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸರಕಾರ ಸಣ್ಣ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಬೇಕು.

ಹಗಲು-ರಾತ್ರಿ ಕಷ್ಟಪಟ್ಟು ದುಡಿದ ರೈತನಿಗೆ ತನ್ನ ಬೆಳೆಗೆ ಸರಿಯಾದ ಬೆಲೆ ಸಿಗದೇ ಇದ್ದಾಗ ಸಹಜವಾಗಿ ಕೃಷಿಯಲ್ಲಿ ಉತ್ಸಾಹ ಕೆಳೆದುಕೊಳ್ಳುತ್ತಾನೆ. ಭಾರತ ಸರಕಾರವೇ ರೈತನೊಂದಿಗೆ ಪಾಲುದಾರನಾದರೆ ಬೆಲೆ ಕುಸಿತದ ಪರಿಣಾಮವನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ.

ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತನ ಜೀವನ ಮಟ್ಟ ಕುಸಿದಿರುವುದರಿಂದ ರೈತನಿಗೆ ವಿವಾಹವಾಗಲು ಕನ್ಯೆ ದೊರೆಯುವುದು ಕೂಡ ಕಷ್ಟವಾಗುತ್ತಿದೆ. ಇದರಿಂದಾಗಿ ರೈತನ ಮನೋಬಲ ಕುಗ್ಗಿ ಕೀಳರಿಮೆಗೆ ಒಳಗಾಗಿದ್ದಾನೆ. ಅದರಿಂದ ಹೊರಬರಲು ಸರಕಾರ ಕೃಷಿಯನ್ನು ಒಂದು ಉದ್ಯಮ ಎಂದು ಪರಿಗಣಿಸಬೇಕು. ರೈತನಿಗೆ ಉದ್ಯಮಿಯ ಸ್ಥಾನಮಾನ ದೊರೆಯುವಂತೆ ಮಾಡಬೇಕು. ಸರಕಾರ ಸ್ಮಾರ್ಟ್ ನಗರಗಳನ್ನು ನಿರ್ಮಿಸುವ ಬದಲು, ಸ್ಮಾರ್ಟ್ ಹಳ್ಳಿಗಳನ್ನು ನಿರ್ಮಿಸಬೇಕು.

ಕೃಷಿಗೆ ಬೇಕಾಗುವ ಬೀಜ, ಗೊಬ್ಬರ, ಕೃಷಿ ಉಪಕಾರಣಗಳು, ಕೃಷಿ ಕಾರ್ಮಿಕರ ವೇತನ ಹೀಗೆ ಪ್ರತಿಯೊಂದು ವಸ್ತು ಹಾಗೂ ಸೇವೆಯ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದು ಗಮನಾರ್ಹ. ಭಾರತ ಸರಕಾರ ರೈತನೊಂದಿಗೆ ಭಾಗಿದಾರನಾದರೆ ಇವುಗಳಿಗೆ ಸೂಕ್ತ ಕಡಿವಾಣ ಹಾಕಬಹುದು.

ಅವಿಭಕ್ತ ಕುಟುಂಬಗಳ ದೇಶವಾಗಿದ್ದ ಭಾರತಲ್ಲಿ ಅವಿಭಕ್ತ ಕುಟುಂಬಗಳು ಒಡೆದು ಹೋಗುತ್ತಿವೆ. ದೊಡ್ಡ ದೊಡ್ಡ ಜಮೀನುಳ್ಳ ರೈತಾಪಿ ಕುಟುಂಬಗಳು ವಿಭಜನೆಗೊಂಡಾಗ ಜಮೀನನ್ನು ತುಂಡರಿಸಬೇಕಾದ ಅನಿವಾರ್ಯತೆ ಎದುರಾಗುವುದು. ಜಮೀನು ವಿಭಜಿಸಿದಾಗ ಬದುವುಗಳನ್ನು (ವಡ್ಡು) ಹಾಕಬೇಕಾಗುತ್ತದೆ. ಹೀಗಾಗಿ ದೇಶಾದ್ಯಂತ ಬದುವುಗಳ ಪ್ರಮಾಣ ಲೆಕ್ಕ ಹಾಕಿದರೆ ಕೋಟ್ಯಾನುಗಟ್ಟಲೆ ಎಕರೆ ಜಮೀನು ಕೇವಲ ಬದುವುಗಳಲ್ಲೇ ಉಳಿದು ಕೆಲಸಕ್ಕೆ ಬಾರದಂತಾಗಿದೆ. ಅಣ್ಣ ತಮ್ಮಂದಿರ ವ್ಯಾಜ್ಯದಿಂದಾಗಿ ಲೆಕ್ಕವಿಲ್ಲದಷ್ಟು ಕೃಷಿ ಭೂಮಿ ಪಡ ಬಿದ್ದಿದೆ.

ಜಮೀನು ತುಂಡಾಗುವುದರ ಇನ್ನೊಂದು ದುಷ್ಟರಿಣಾಮವೆಂದರೆ, ದೊಡ್ಡ ಜಮೀನಿನ ಹಿಡುವಳಿದಾರರು ಸಣ್ಣ ಹಿಡುವಳಿದಾರರಾಗಿ ಮಾರ್ಪಟ್ಟು ಕೃಷಿ ಉತ್ಪನ್ನದ ಖರ್ಚು ನೀಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಭಾರತ ಸರಕಾರ ಎಲ್ಲ ರೈತರ ಜಮೀನನ್ನು ಒಟ್ಟುಗೂಡಿಸಿ ಸಾವಿರಾರು ಎಕರೆಗಳ ಅಖಂಡ ಭೂಮಿಯನ್ನು ಉಳಿಮೆ ಮಾಡಿದಾಗ ಕೃಷಿ ಉತ್ಪನ್ನದ ಖರ್ಚು ಕಡಿಮೆಗೊಳಿಸಬಹುದು. ಜಮೀನಿಗೆ ತಕ್ಕಂತೆ ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿ ಮಿಶ್ರ ಬೆಳೆಗಳನ್ನು ಬೆಳೆದಾಗ ಬೆಲೆ ಕುಸಿತದ ಅಪಾಯದಿಂದಲೂ ಪಾರಾಗಬಹುದು.

ಸರಕಾರದ ಸಹಭಾಗಿತ್ವದಲ್ಲಿ ಕೃಷಿ ನಡೆದರೆ ದೊಡ್ಡ ಪ್ರಮಾಣದಲ್ಲಿ ಬೆಳೆಗಳನ್ನು ಬೆಳೆದು ರಫ್ತು ಮಾಡುವ ಅವಕಾಶಗಳು ಸಹ ಹೇರಳವಾಗಿ ದೊರೆಯುವುದು. ಒಟ್ಟಾರೆ ಹೇಳುವುದಾದರೆ ರೈತನೊಂದಿಗೆ ಸರಕಾರ ಕೈ ಜೋಡಿಸಿದರೆ ನಿರ್ಲಕ್ಷ್ಯಕ್ಕೊಳಗಾದ ಕೃಷಿಯನ್ನು ಮತ್ತೊಮ್ಮೆ ಒಂದು ಬೃಹತ್ ಉದ್ದಿಮೆಯನ್ನಾಗಿ ಮಾಡಲು ಸಾಧ್ಯ. ಇಸ್ರೇಲ್‌ನಂಥ ಪುಟ್ಟ ದೇಶ ಸಮುದ್ರದ ನೀರಿನಿಂದ ಕೃಷಿ ಮಾಡಿ ಬೆಳೆಗಳನ್ನು ಬೆಳೆದು ರಫ್ತು ಮಾಡುವ ಹಂತಕ್ಕೆ ತಲುಪಿದ್ದಾರೆಂದರೆ, ಫಲವತ್ತಾದ ಭೂಮಿ ತುಂಬಿ ಹರಿಯುವ ಹೊಳೆ-ಹಳ್ಳಗಳ ದೇಶವಾದ ಭಾರತದಲ್ಲಿ ಇದನ್ನು ಸಾಧಿಸಲು ಅಸಾಧ್ಯವೇ…?

– ಮಂಜುನಾಥ ಚನ್ನಪ್ಪನವರ.

ಬೆಟಗೇರಿ, ಗದಗ.


Spread the love

LEAVE A REPLY

Please enter your comment!
Please enter your name here