ಬೆಂಗಳೂರು: ಚಿನ್ನದ ಅಂಗಡಿ ಮುಚ್ಚುವ ಸಮಯದಲ್ಲೇ ಗನ್ ಹಿಡಿದು ಬಂದ ಮೂವರು ಮುಸುಕುಧಾರಿ ಕಳ್ಳರು ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಚೋಹಳ್ಳಿ ಗೇಟ್ ಬಳಿಯ ರಾಮ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದೆ.
ರಾತ್ರಿ ಸುಮಾರು 8:30ರ ಸುಮಾರಿಗೆ, ಅಂಗಡಿಮಾಲಿಕ ಕನ್ನಯ್ಯಲಾಲ್ ಅಂಗಡಿ ಮುಚ್ಚಲು ಸಜ್ಜಾಗುತ್ತಿದ್ದ ವೇಳೆ, ಮೂರು ಮಂದಿ ಕಳ್ಳರು ಮುಖ ಮುಚ್ಚಿಕೊಂಡು ಗನ್ಗಳೊಂದಿಗೆ ಅಂಗಡಿಗೆ ನುಗ್ಗಿದ್ದಾರೆ. ಗನ್ ಹಿಡಿದು ಹೆದರಿಸಿ ಟೇಬಲ್ ಮೇಲಿದ್ದ ಚಿನ್ನವನ್ನು ಬಾಚಿಕೊಂಡಿದ್ದಾರೆ.
ಮಾಲೀಕ ಕನ್ನಯ್ಯಲಾಲ್ ಕೂಗಾಡಿದರೂ ಕನ್ನಯ್ಯಲಾಲ್ ಮತ್ತು ಸಿಬ್ಬಂದಿಯನ್ನು ತಳ್ಳಿ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಇನ್ನು ಕೂಗಾಟ ಕೇಳಿ ಪಕ್ಕದ ಅಂಗಡಿಯ ಹುಡುಗ ಬಂದಿದ್ದು, ಆತನನ್ನು ತಳ್ಳಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೈಗೆ ಸಿಕ್ಕ ಚಿನ್ನವನ್ನ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.