ಗದಗ: ಸರ್ವಿಸ್ ವೈರ್ ಕಳ್ಳತನ ಮಾಡ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳನಿಗೆ ಮಿಲ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಗದಗ ನಗರದ ಹಳೆಯ ಡಿಸಿ ಸರ್ಕಲ್ ಬಳಿಯ ಹತ್ತಿ ಮಿಲ್ ಆಫೀಸ್ ಬಳಿ ನಡೆದಿದೆ.
ಹತ್ತಿ ಮಿಲ್ ಆಫೀಸ್ ನ ಸರ್ವಿಸ್ ವೈರ್ ಕದಿಯಲು ಬಂದ ಮೂವರಲ್ಲಿ ಒಬ್ಬ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಕಳ್ಳನನ್ನು ಹಿಡಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಅಷ್ಟೊಂದು ಗೂಸಾ ಬೀಳೂತ್ತಿದ್ದರೂ ಸಹ ಈ ಕಳ್ಳ ತಗ್ಗೋದೆಯಿಲ್ಲ ಅಂತ ಪುಷ್ಪ ಸಿನಿಮಾದ ಡೈಲಾಗ್ ಹೇಳಿ ಆ್ಯಟಿಟ್ಯೂಡ್ ಪ್ರದರ್ಶಿಸಿದ್ದಾನೆ.
ಇದರಿಂದ ಮತ್ತಷ್ಟು ಕೋಪಗೊಂಡ ಜನರು ಹಿಗ್ಗಾಮುಗ್ಗಾ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದಲ್ಲಿ ಮೂರು ಜನ ಕಳ್ಳರಿಂದ ಹಲವು ಕಡೆಯ ಕಚೇರಿಗೆ ಹಾಕಿದ್ದ ವಿದ್ಯುತ್ ಸಂಪರ್ಕದ ವೈರ್ ಕಳ್ಳತನ ಮಾಡುತಿದ್ದರು. ವೈರ್ ಸುಟ್ಟು ಉಳಿದ ತಂತಿಯನ್ನ ಕೇಜಿಗಟ್ಟಲೆ ಮಾರಿ ಹಣ ಮಾಡುತಿದ್ದರು.
ಜತೆಗೆ ಬ್ಯಾಟರಿ ಹಾಗು ಜೆಸಿಬಿಗಳ ಬಿಡಿಭಾಗಗಳನ್ನ ಸಹ ಕಳ್ಳತನ ಮಾಡುತಿದ್ದರು. ಅದಲ್ಲದೆ ಗದಗ ನಗರದ ಹಲವು ಕಡೆ ಪೆಟ್ರೋಲ್ ಬಂಕ್, ಪಾನ್ ಶಾಪ್ ಸೇರಿದಂತೆ ಮನೆಗಳ್ಳತನ ಸಹ ನಡೆದಿದ್ದವು. ಹೀಗಾಗಿ ಕಳ್ಳರ ಹಾವಳಿಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಕಳ್ಳರನ್ನ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತ ರೋಣ ತಾಲೂಕಿನ ಹಳ್ಳಿಯೊಂದರ ಹೆಸರು ಹೇಳುತ್ತಿದ್ದು, ತನ್ನ ಹೆಸರನ್ನು ಮಹಾಂತೇಶ್ ಎಂದು ಹೇಳುತ್ತಿದ್ದಾನೆ. ಮಂಗಳೂರು ಜಿಲ್ಲೆಯಲ್ಲಿ ದುಡಿಯಲು ಹೋಗಿದ್ದು, ಅಲ್ಲಿ ಮಳೆಯಾಗುತ್ತಿರುವದರಿಂದ ವಾಪಾಸು ಊರಿಗೆ ಬಂದಿರುವದಾಗಿ ಹೇಳಿಕೊಂಡಿದ್ದಾನೆ. ಉಳಿದ ಇನ್ನಿಬ್ಬರು ಯಾರು? ಎಂಬ ಮಾಹಿತಿ ಪೊಲೀಸರಿಂದ ತಿಳಿದು ಬರಬೇಕಿದೆ.