ಅರಸೀಕೆರೆ: ಜನರ ಋಣ ತೀರಿಸಬೇಕು ಎಂಬ ಕಾರಣಕ್ಕೆ ಶಾಸಕ ಶಿವಲಿಂಗೇಗೌಡರು ಸಿಎಂ ಹಾಗೂ ನನ್ನ ಬೆನ್ನು ಬಿದ್ದು, ಕನಕಪುರ ಹಾಗೂ ವರುಣಾ ಕ್ಷೇತ್ರಗಳಿಗಿಂತ ಹೆಚ್ಚು ಕೆಲಸವನ್ನು ಅರಸೀಕೆರೆಯಲ್ಲಿ ಮಾಡಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಅರಸೀಕೆರೆಯಲ್ಲಿ ನಡೆದ ವಿವಿಧ ಇಲಾಖೆಗಳ ಯೋಜನೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಇಂದು ಅರಸೀಕೆರೆ ತಾಲೂಕಿಗೆ ಐತಿಹಾಸಿಕ ದಿನ. ನಾವು ಹಾಗೂ ಮುಖ್ಯಮಂತ್ರಿಗಳು ಈ ಕ್ಷೇತ್ರಕ್ಕೆ ಸುಮ್ಮನೆ ಬಂದಿಲ್ಲ. ರಾಜ್ಯದಲ್ಲಿ 136 ಶಾಸಕರ ಬಲದ ಸರ್ಕಾರ ರಚಿಸಲು ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಹಕಾರಿಯಾದ ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇವೆ. ನಮಗೆ ಶಿವಲಿಂಗೇಗೌಡರ ಕಾಟ ಹೆಚ್ಚಾಗಿದೆ.
ಅವರು ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಮನೆ ಸುತ್ತಲು ನಾಲ್ಕು ಜೊತೆ ಚಪ್ಪಲಿ ಸವೆಸಿರಬಹುದು. ಅವರು ಪ್ರತಿ ಬಾರಿ ಬಂದಾಗಲೂ ನಾನು ಕ್ಷೇತ್ರದ ಜನರ ಋಣ ತೀರಿಸಬೇಕು. ಈ ಯೋಜನೆಗಳಿಗಾಗಿ ನಾನು ದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನೀವು ನೆರವು ನೀಡಲೇಬೇಕು ಎಂದು ನಮ್ಮ ಬೆನ್ನು ಬಿದ್ದಿದ್ದಾರೆ” ಎಂದು ತಿಳಿಸಿದರು.
“ಕನಕಪುರ ಹಾಗೂ ವರುಣಾ ಕ್ಷೇತ್ರಕ್ಕಿಂತ ಹೆಚ್ಚು ಕೆಲಸಗಳನ್ನು ಅರಸೀಕೆರೆ ಕ್ಷೇತ್ರದಲ್ಲಿ ಶಿವಲಿಂಗೇಗೌಡರು ಮಾಡಿಸಿದ್ದಾರೆ. ನಮ್ಮ ತಾಲೂಕಿನಲ್ಲಿ ಡಿಪ್ಲಮೋ, ಇಂಜಿನಿಯರಿಂಗ್ ಕಾಲೇಜು ಇಲ್ಲ. ನಮ್ಮ ಊರಿಗೆ ನೀರಿಲ್ಲ. ಆದರೆ ಹೇಮಾವತಿ, ಎತ್ತಿನಹೊಳೆ ನೀರು ನಮಗೆ ಬೇಕು ಎಂದು ಹೋರಾಟ ಮಾಡಿ ಸಚಿವಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಇಂದು ನಿಮ್ಮ ಮುಂದೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
“ನಾವು ನಮ್ಮ ಜೀವನದಲ್ಲಿ ನಾಲ್ಕು ಋಣಗಳನ್ನು ತೀರಿಸಬೇಕು ತಂದೆತಾಯಿ ಋಣ, ದೇವರ ಋಣ, ಗುರುವಿನ ಋಣ, ಸಮಾಜದ ಋಣ ತೀರಿಸಬೇಕು. ಈ ಋಣಗಳನ್ನು ಧರ್ಮದಿಂದಲೇ ತೀರಿಸಬೇಕು ಎಂದು ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ ಹೇಳುತ್ತಾನೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371ಜೆ ಜಾರಿಗೆ ತಂದು ಹೇಗೆ ಮಲ್ಲಿಕಾರ್ಜುನ ಖರ್ಗೆ ಅವರು ಆ ಭಾಗದ ಜನರ ಋಣ ತೀರಿಸಿದರೋ ಅದೇ ರೀತಿ ಶಿವಲಿಂಗೇಗೌಡರು ನಿಮ್ಮೆಲ್ಲರ ಋಣ ತೀರಿಸಿದ್ದಾರೆ. ರಾಜ್ಯದಲ್ಲಿ ಮಲತಾಯಿ ಧೋರಣೆಗೆ ಒಳಗಾಗಿದ್ದ ಅರಸೀಕೆರೆ ಕ್ಷೇತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಇಂತಹ ಶಾಸಕರು ನಮ್ಮ ಎಲ್ಲಾ ಕ್ಷೇತ್ರಗಳಲ್ಲಿ ಇದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಮತ್ತಷ್ಟು ಹೆಚ್ಚಿನ ಸೀಟುಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಯೋಗಿ ಎಂದು ಕರೆಸಿಕೊಳ್ಳುವ ಮುನ್ನ ನಾವು ಉಪಯೋಗಿ ಎಂದು ಕರೆಸಿಕೊಳ್ಳಬೇಕು. ಜನರ ಪ್ರೀತಿ ವಿಶ್ವಾಸ ಮರದಲ್ಲಿ, ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ನಾವು ಕೆಲಸ ಮಾಡುವ ಮೂಲಕ ಜನರ ಮನದಲ್ಲಿ ಪ್ರೀತಿ ವಿಶ್ವಾಸ ಗಳಿಸಬೇಕು. ಇಲ್ಲಿನ ಕೆರೆಗಳು ತುಂಬಬೇಕು, ನೀರಾವರಿ ಯೋಜನೆಗಳು ಜಾರಿಯಾಗಿ ರೈತನ ಬದುಕು ಹಸನ ಮಾಡಬೇಕು. ರೈತರಿಗೆ ಸಂಬಳ, ವೇತನ, ಪಿಂಚಣಿ, ಲಂಚ ಯಾವುದೂ ಇಲ್ಲ. ಹೀಗಾಗಿ ರೈತರಿಗೆ ಸಹಾಯ ಮಾಡಲೇಬೇಕು ಎಂದು ಶಿವಲಿಂಗೇಗೌಡರು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ಈ ಎಲ್ಲಾ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿಸಿದ್ದಾರೆ” ಎಂದರು.