ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರಕಾರ ಪೂರೈಸಿದ ರಸಗೊಬ್ಬರವನ್ನು ರೈತರಿಗೆ ವ್ಯವಸ್ಥಿತವಾಗಿ ಹಂಚಿಕೆ ಮಾಡಬೇಕಾದ ರಾಜ್ಯ ಸರಕಾರ, 25 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡಲಿದೆ. ಎರಡು-ಮೂರು ದಿನದಲ್ಲಿ ಗದಗ ಜಿಲ್ಲೆಯಲ್ಲಿಯೂ ರೈತರ ಪರವಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಪ್ರತಿಯೊಬ್ಬ ರೈತರಿಗೆ ಕೇಂದ್ರ ಸರಕಾರ ಕೊಟ್ಟಿರುವ ಯೂರಿಯಾ ಗೊಬ್ಬರವನ್ನು ರೈತರ ಅವಶ್ಯಕತೆಗೆ ಅನುಗುಣವಾಗಿ ಕೊಡಿಸುವವರೆಗೆ ಬಿಜೆಪಿ ಕಾರ್ಯಕರ್ತರು ರೈತರ ಬೆನ್ನೆಲುಬಾಗಿ ಕೆಲಸ ಮಾಡಲಿದ್ದಾರೆ. ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರದ ಮಾರಾಟ ತಡೆದು, ರೈತರ ಪರವಾಗಿ ಬಿಜೆಪಿ ಹೋರಾಟ ರೂಪಿಸಲಿದೆ ಎಂದರು.
ಬಿಜೆಪಿ ಸರಕಾರ ಅವಧಿಯಲ್ಲಿ ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಫರ್ ಸ್ಟಾಕ್ ಮಾಡುತ್ತಿದ್ದೆವು. ಯೂರಿಯಾ ಉತ್ಪಾದನೆ ಮಾಡುತ್ತಿರುವ ಕಂಪನಿಗಳಿಂದ ಆವರ್ತ ನಿಧಿ ಕೊಟ್ಟು ಎಮರ್ಜೆನ್ಸಿ ಬಫರ್ ಸ್ಟಾಕ್ ಮಾಡುತ್ತಿದ್ದೆವು. ಸಿದ್ದರಾಮಯ್ಯ ಸರಕಾರ 1 ಸಾವಿರ ಕೋಟಿ ರೂ. ಇದ್ದ ಆವರ್ತ ನಿಧಿಯನ್ನು 400 ಕೋಟಿ ರೂ.ಗೆ ಇಳಿಸಿದೆ. ಕೃಷಿ ಇಲಾಖೆ, ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರೂ ಹೆಚ್ಚಿನ ಯೂರಿಯಾ ಗೊಬ್ಬರಕ್ಕಾಗಿ ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸದೇ ಮೋಸ ಮಾಡಿದೆ. ಸಿದ್ದರಾಮಯ್ಯ ಸರಕಾರದ ಈ ರೈತ ವಿರೋಧಿ ನೀತಿಯನ್ನು ಬಿಜೆಪಿ ರೈತ ಮೋರ್ಚಾ ಖಂಡಿಸಿ ಪ್ರತಿಭಟನೆ ನಡೆಸಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಹಾಹಾಕಾರ ಆರಂಭವಾಗಿದ್ದರೂ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಒಮ್ಮೆಯೂ ರೈತರ ಸಮಸ್ಯೆ ಪರಿಹಾರಕ್ಕೆ ಯತ್ನಿಸಿಲ್ಲ. ಕಾನೂನು ಸಚಿವರು ತಮ್ಮ ತವರು ಕ್ಷೇತ್ರದ ರೈತರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮುಖಂಡರಾದ ಎಂ.ಎಸ್. ಕರಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಗೆ ಬೇಡಿಕೆಗಿಂತ ಹೆಚ್ಚು ಯೂರಿಯಾ ಗೊಬ್ಬರ ಪೂರೈಕೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹೇಳುತ್ತಾರೆ. ಆದರೆ ಜಿಲ್ಲೆಯಲ್ಲಿ ಯಾವೊಬ್ಬ ರೈತರಿಗೂ ಸಮರ್ಪಕವಾಗಿ ಯೂರಿಯಾ ಸಿಕ್ಕಿಲ್ಲ. ಪ್ರತಿ ರೈತರಿಗೆ 1-2 ಚೀಲ ಮಾತ್ರ ಗೊಬ್ಬರ ನೀಡಲಾಗುತ್ತಿದೆ. ಯೂರಿಯಾ ಪೂರೈಕೆ ಬಗ್ಗೆ ರೈತರಲ್ಲಿ ಸಾಕಷ್ಟು ಅಸಮಾಧಾನವಿದೆ. ಆದರೂ ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ಮೆಕ್ಕೆಜೋಳ ಬಿತ್ತನೆ ಹೆಚ್ಚಾಗಿರುವುದು ಯೂರಿಯಾ ಕೊರತೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ.
– ಡಾ. ಚಂದ್ರು ಲಮಾಣಿ.
ಶಿರಹಟ್ಟಿ ಶಾಸಕರು.