ಬಳ್ಳಾರಿ:- ಇಲ್ಲಿನ ಸಿರುಗುಪ್ಪ ತಾಲೂಕಿನ ದೇವಿನಗರ ಗ್ರಾಮದ ಬಳಿ ಕಾರು ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ.
ಶಂಕರಗೌಡ (58), ಬಸವರಾಜ್ (56) ಮೃತರು. ಇವರು ಸಿಂಧನೂರಿನ ತುರ್ವಿಹಾಳ ಗ್ರಾಮದವರಾಗಿದ್ದಾರೆ. ಅಪಘಾತದಲ್ಲಿ ದ್ಯಾವಪ್ಪ, ಜಲಾಲಮ್ಮ ಹಾಗೂ ಶಂಭುಲಿಂಗ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು, ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿ ಐದು ಜನ ಪ್ರಯಾಣ ಮಾಡುತ್ತಿದ್ದರು. ಲಾರಿ ಕಾರಿಗೆ ವೇಗವಾಗಿ ಬಂದು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.