ಬೆಂಗಳೂರು:- ಸಿದ್ದರಾಮಯ್ಯನವರಿಗೆ ಅಧಿಕಾರಿಗಳು ಹಾಗೂ ಶಾಸಕರ ಮೇಲೆ ಹಿಡಿತವಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪವರ್ ತೋರಿಸಲು ಡಿ.ಕೆ.ಶಿವಕುಮಾರ್ ಅವರನ್ನು ಸಭೆಗೆ ಆಹ್ವಾನಿಸಿಲ್ಲ. ಕಾಂಗ್ರೆಸ್ ಶಾಸಕರ ಬೆಂಬಲ ಡಿಕೆಶಿಗೆ ಇಲ್ಲವೆಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದ್ದರಿಂದಲೇ ಆ ಸಭೆಗೆ ಅವರನ್ನು ಕರೆದಿಲ್ಲ ಎಂದು ಟೀಕಿಸಿದರು.
ಎರಡು ವರ್ಷದಿಂದ ಏನೂ ಕೊಡದೆ ಈಗ 50 ಕೋಟಿ ನೀಡಿದರೆ ಪ್ರಯೋಜನವಿಲ್ಲ. ಅದರಲ್ಲೂ ಸಿದ್ದರಾಮಯ್ಯನವರ ಬೆಂಬಲಿಗ ಶಾಸಕರಿಗೆ ಮಾತ್ರ 50 ಕೋಟಿ ರೂ. ನೀಡಲಾಗುತ್ತಿದೆ. ಬಿಜೆಪಿ ಶಾಸಕರಿಗೂ 50 ಕೋಟಿ ರೂ. ನೀಡಬೇಕೆಂದು ಆಗ್ರಹಿಸಲಾಗುವುದು ಎಂದು ಅಶೋಕ್ ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಎಲ್ಲ ವರ್ಗಗಳ ನಾಯಕರಾಗಿ ಉಳಿದಿಲ್ಲ. ಅವರು ಸ್ವಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಬೆಳೆದಿದೆ. ಸಿದ್ದರಾಮಯ್ಯನವರಿಗೆ ಅಧಿಕಾರಿಗಳ ಮೇಲೆ ಹಾಗೂ ಶಾಸಕರ ಮೇಲೆ ಹಿಡಿತವಿಲ್ಲ. ಅಭಿವೃದ್ಧಿ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ. ರಸಗೊಬ್ಬರ ವಿತರಣೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.