ಕಾಂತಾರ ಸಿನಿಮಾದ ಬಳಿಕ ನಟ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ‘ಕಾಂತಾರ ಅಧ್ಯಾಯ 1’ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಕಾಂತಾರ ಅಧ್ಯಾಯ 1 ಬಿಡುಗಡೆಗೂ ಮುನ್ನವೇ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.
ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಗರಡಿಯಲ್ಲಿ ಪಳಗಿರುವ ತೆಲುಗಿನ ನಿರ್ದೇಶಕ ಅಶ್ವಿನ್ ಗಂಗರಾಜು ನಿರ್ದೇಶನದ ಐತಿಹಾಸಿಕ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಸಿತಾರಾ ಎಂಟರ್‌ಟೇನ್‌ಮೆಂಟ್‌ನ ನಾಗವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ನಟನೆಯ ಹೊಸ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ‘ಸುಟ್ಟ ಭೂಮಿಯಿಂದ ಒಬ್ಬ ಬಂಡುಕೋರ ಹುಟ್ಟಿದ’ ಎಂಬ ಟ್ಯಾಗ್‌ಲೈನ್ ನೀಡಲಾಗಿದೆ.
‘ಎಲ್ಲ ಬಂಡುಕೋರರೂ ಯುದ್ಧವನ್ನು ಆಯ್ಕೆ ಮಾಡುವುದಿಲ್ಲ. ಕೆಲವರನ್ನು ವಿಧಿ ಆಯ್ಕೆ ಮಾಡುತ್ತದೆ ಮತ್ತು ಈ ಸಿನಿಮಾ ಅಂಥಾ ಒಬ್ಬ ಬಂಡುಕೋರನ ಕಥೆ ಹೇಳುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.