ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ನಗರದಲ್ಲಿ ಯೂರಿಯಾ ರಸಗೊಬ್ಬರವನ್ನು ಪಾಯಿಂಟ್ ಆಫ್ ಸೇಲ್ ಮೂಲಕ ಮಾರಾಟ ಮಾಡದೆ ನಿಗದಿಪಡಿಸಿದ ನಮೂನೆಯಲ್ಲಿ ನಗದು ಅಥವಾ ಸಾಲದ ಬಿಲ್ಲನ್ನು ನೀಡಲು ನಿರಾಕರಿಸುತ್ತಿರುವ ಕುರಿತು ಅನಿರೀಕ್ಷಿತವಾಗಿ ಮುಂಡರಗಿ ತಾಲೂಕಿನ ಎನ್.ಪಿ.ಕೆ ಆಗ್ರೋ ಕೇಂದ್ರದ ಕೃಷಿ ಪರಿಕರ ಮಾರಾಟ ಮಳಿಗೆಗೆ ಮುಂಡರಗಿ ತಾಲೂಕಿನ ತಹಸೀಲ್ದಾರರು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿ, ರಸಗೊಬ್ಬರ ನಿಯಂತ್ರಣ ಆದೇಶ 1985ನ್ನು ಉಲ್ಲಂಘನೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.
ಈ ವೇಳೆ, ಮಾರಾಟ ಮಳಿಗೆಯಲ್ಲಿ ಭೌತಿಕವಾಗಿ ಲಭ್ಯವಿರುವ ರಸಗೊಬ್ಬರ ದಾಸ್ತಾನಿಗೂ ಹಾಗೂ ಪಿ.ಓ.ಎಸ್. ಮಶಿನ್‌ನಲ್ಲಿರುವ ರಸಗೊಬ್ಬರ ದಾಸ್ತಾನಿಗೂ ವ್ಯತ್ಯಾಸ ಕಂಡುಬಂದಿದೆ. ಪ್ರತಿ ಚಿಲ್ಲರೆ ಮಾರಾಟಗಾರನು ತಾನು ಮಾರಾಟ ಮಾಡುವ ವಿವಿಧ ರಸಗೊಬ್ಬರಗಳ ಆ ದಿನದ ಆರಂಭಿಕ ದಾಸ್ತಾನು ಪ್ರಮಾಣ ಮತ್ತು ನಿಗದಿಪಡಿಸಿದ ದರದ ವಿವರಗಳನ್ನು ತಮ್ಮ ಮಾರಾಟ ಮಳಿಗೆಯಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರಮುಖ ಜಾಗದಲ್ಲಿ ಪ್ರದರ್ಶಿಸದೆ ಇರುವುದು, ನಿಗದಿಪಡಿಸಿದ ನಮೂನೆ ಎಮ್‌ನಲ್ಲಿ ನಗದು ಅಥವಾ ಸಾಲದ ಬಿಲ್ಲನ್ನು ನೀಡದೇ ಇರುವುದು, ಪಾರಂ ಓನಲ್ಲಿ ನಮೂದಿಸದೆ ಇರುವ ರಸಗೊಬ್ಬರಗಳನ್ನು ದಾಸ್ತಾನು ಮಾಡಿರುವುದನ್ನು ಗಮನಿಸಿ, ಮಳಿಗೆಯ ಚಿಲ್ಲರೆ ರಸಗೊಬ್ಬರ ಮಾರಾಟ ಪರವಾನಿಗೆಯನ್ನು 15 ದಿನಗಳವರೆಗೆ ಅಮಾನತ್ತಿನಲ್ಲಿಡಲಾಗಿದೆ.
ಕೃಷಿ ಇಲಾಖೆಯ ಕೃಷಿ ಪರಿಕರ ಪರಿವೀಕ್ಷಕರು ಮುಂಡರಗಿ ತಾಲೂಕಿನ ಎಲ್ಲಾ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಬೇಟಿ ನೀಡುತ್ತಿದ್ದು, ಕೃಷಿ ಪರಿಕರಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ ಎರಿಸ್ವಾಮಿ ಪಿ.ಎಸ್, ಮುಂಡರಗಿ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ್, ಸಿಪಿಐ ಮಂಜುನಾಥ ಕುಸಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.