HomeGadag Newsವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಚಟವನ್ನು ವ್ಯಸನ ಎಂದು ಕರೆಯುತ್ತಾರೆ. ವ್ಯಕ್ತಿ ಜೀವನದಲ್ಲಿ ನಿಶ್ಚಿತ ಗುರಿ ಸಾಧಿಸಬೇಕಾದರೆ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಇಂದಿನ ಯುವಜನತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ವ್ಯಸನಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕರೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗದಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಡಾ.ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ ಮಾತನಾಡಿ, ಮಾದಕ ವಸ್ತು ಬಳಕೆ ಮತ್ತು ಸಾಗಾಣಿಕೆ ಶಿಕ್ಷಾರ್ಹ ಅಪರಾಧವಾಗಿದೆ. ಸಾಂಕ್ರಾಮಿಕ ರೋಗಗಳಿಗೆ ಪ್ರೇರಕ ಎಚ್.ಐ.ವಿ. ಏಡ್ಸ್ ರೋಗಗಳಿಗೆ ವಾಹಕ, ಶಾಲಾ ಕಾಲೇಜುಗಳ ಗೈರು ಹಾಜರಿಗೆ ಇಂಬುಕೊಡುವ, ಉದ್ಯೋಗ, ಆದಾಯ ಹಾಳು ಮಾಡಲು, ವಿದ್ವಂಸಕ ಅಪರಾಧ, ಭ್ರಷ್ಟಾಚಾರ, ಕಪ್ಪು ಹಣ, ಭಯೋತ್ಪಾದನೆಗಳಿಗೆ ಪ್ರಚೋದಕವಾಗಿವೆ ಎಂದು ತಿಳಿಸಿ, ಮಾದಕವಸ್ತು ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಗದಗ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದ ಕರಿನಾಗಣ್ಣವರ ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಿದರು. ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದ್ದು, ಒಂದು ಸಿಗರೇಟ್ ಸೇರುವುದರಿಂದ ಜೀವನದ ಅತ್ಯಮೂಲ್ಯ 11 ನಿಮಿಷಗಳನ್ನು ಕಳೆದುಕೊಳ್ಳುತ್ತೆ ಹಾಗೂ ಸಿಗರೇಟ್‌ನಲ್ಲಿ 6000ಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳಿರುತ್ತವೆ. ವಿದ್ಯಾರ್ಥಿಗಳು ಕುತೂಹಲದಿಂದ ಮಾದಕ ವ್ಯಸನ ಪ್ರಾರಂಭಿಸಿ ಅದರಿಂದ ಹೊರಬರದಂತೆ ಅದಕ್ಕೆ ದಾಸರಾಗುತ್ತಾರೆ. ಹಾಗಾಗಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ಜೀವನದಲ್ಲಿ ಸಫಲರಾಗಬೇಕೆಂದು ವಿವರಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ, ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಸಮನ್ವಯಾಧಿಕಾರಿ ಎಂ.ಎಚ್. ಕಾಂಬಳಿ, ವಾರ್ತಾಧಿಕಾರಿ ವಸಂತ ಮಡ್ಲೂರ, ವಿವಿಧ ಇಲಾಖೆಯ ಅಧಿಕಾರಿಗಳು, ಪ್ರೌಢಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು.

ಗಮನ ಸೆಳೆದ ಜಾಗೃತಿ ಗೀತೆ, ಕಿರುನಾಟಕ

ರೋಣದ ಜೀವನ ಬೆಳಕು ಕಲಾ ತಂಡದ ರಾಜಶೇಖರ ಹಿರೇಮಠ ಹಾಗೂ ತಂಡದವರು ಪ್ರಸ್ತುತಪಡಿಸಿದ ದೀಪ ನೃತ್ಯ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ಗೀತೆಗಳು ಶ್ರೋತೃಗಳ ಗಮನ ಸೆಳೆದವು. ಗದಗ-ಬೆಟಗೇರಿಯ ಎಸ್‌ಎಸ್‌ಕೆ ಜಗದಂಬಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವ್ಯಸನಮುಕ್ತ ದಿನಾಚರಣೆಯ ನಿಮಿತ್ತ ಕಿರುನಾಟಕ ಪ್ರಸುತಪಡಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.

“ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಜನರು ಮದ್ಯಪಾನ, ತಂಬಾಕು, ಗುಟ್ಕಾ, ಸಿಗರೇಟು ಸೇವನೆ ಮುಂತಾದ ದುಶ್ಚಟಗಳ ದಾಸರಾಗದಂತೆ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬೇಕು. ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮೊಬೈಲ್‌ನ ಅತಿಯಾದ ಬಳಕೆಯಿಂದ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ವ್ಯಸನಗಳ ಬೆನ್ನಟ್ಟಿ ಹೋಗದಂತೆ ದೃಢವಾದ ಆತ್ಮವಿಶ್ವಾಸ ಹೊಂದುವುದು ಮುಖ್ಯವಾಗಿದೆ”

– ಸಿ.ಎನ್. ಶ್ರೀಧರ್.

ಜಿಲ್ಲಾಧಿಕಾರಿಗಳು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!