ಹೆಸರು ಬೆಳೆಯ ಕೀಟ ಬಾಧೆ ಹತೋಟಿಗೆ ಸಲಹೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನಾದ್ಯಂತ ಹೆಸರು ಬೆಳೆಗೆ ಕೀಟ ಬಾಧೆ, ಕಾಯಿ ಗೊಂಚಲು ಉದುರುವುದು ಹಾಗೂ ಹಳದಿ ನಂಜಾಣು ರೋಗದಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾನಿಗೊಳಗಾದ ಹರ್ಲಾಪೂರ, ಲಕ್ಕುಂಡಿ, ತಿಮ್ಮಾಪೂರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗಗಳ ಬಗ್ಗೆ ಪರಿಶೀಲಿಸಿ ರೈತರಿಗೆ ಮಾಹಿತಿ ನೀಡಿದರು.

Advertisement

ಕೀಟಶಾಸ್ತ್ರ ವಿಜ್ಞಾನಿ ಎಸ್.ವಿ. ಹೂಗಾರ ಮಾತನಾಡಿ, ಯಾವುದೇ ಕೀಟಗಳಿಂದ ಕಾಯಿಗಳು ನೆಲಕ್ಕೆ ಬಿದ್ದಿಲ್ಲ. ಬದಲಾಗಿ, ಅಡವಿಯಲ್ಲಿ ಇರುವ ಮೊಲಗಳ ಮರಿಗಳು ಈ ಕಾಯಿಗಳ ಗೊಂಚಲನ್ನು ಕಡಿದು ಹಾಕಿದಂತಿದೆ. ನೆಲಕ್ಕೆ ಬಿದ್ದ ಹೆಸರು ಕಾಯಿಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸುತ್ತೇವೆ ಎಂದರು.

ಬೇಸಾಯ ಶಾಸ್ತ್ರ ವಿಜ್ಞಾನಿ ಪ್ರಸನ್ನ ಕುಮಾರ್ ಬಿ.ಎಚ್ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದ್ದು, ಉತ್ತಮ ಬೆಳೆ ಬಂದಿದೆ. ಆದರೆ ಈಗ ಹಳದಿ ನಂಜಾಣು ರೋಗ ಸೇರಿದಂತೆ ಅನೇಕ ಕೀಟ ಹಾಗೂ ರೋಗಭಾದೆ ಅಲ್ಲಲ್ಲಿ ಕಂಡುಬರುತ್ತಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಸತತ ಮಳೆ ಸುರಿಯುತ್ತಿರುವದರಿಂದ ತಂಪು ವಾತಾವರಣ ಹೆಚ್ಚಾಗಿ ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಕಂಡುಬಂದಿದ್ದು, ರೈತರು ತಮ್ಮ ಜಮೀನಿನಲ್ಲಿ ಹಳದಿ ಬಣ್ಣದ ಬೆಳೆಗಳಿದ್ದರೆ ಅದನ್ನು ಕಿತ್ತು ಭೂಮಿಯಲ್ಲಿ ಹೂಳಬೇಕು. ಇದು ಅಂಟು ರೋಗವಾಗಿರುವದರಿಂದ ಗಿಡದಿಂದ ಗಿಡಕ್ಕೆ ಹರಡುತ್ತಾ ಹೋಗುತ್ತದೆ ಎಂದು ವಿವರಿಸಿದರು.

ಎಲೆ ತಿನ್ನುವ ಕೀಟ ಬಾಧೆಗಳಿಗಾಗಿ ಡೈಯೊಮಿಥೋಯೇಟ್ 1.7 mಟ ಮೊನೊಕ್ರೊಟೊಪಾಸ್ 1mಟ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೇವಿನ ಎಣ್ಣೆಯನ್ನು ಕೀಟಗಳ ನಿಯಂತ್ರಣಕ್ಕಾಗಿ ಸಿಂಪಡಿಸಿದರೆ ಎಲೆ ತಿನ್ನುವ ಕೀಟ ಬಾಧೆ ನಿಯಂತ್ರಣವಾಗುತ್ತದೆ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವರಾಜೇಶ್ವರಿ ಸಜ್ಜನರ, ತಳಿ ಶಾಸ್ತ್ರ ವಿಜ್ಞಾನಿ ಎಂ.ಡಿ. ಪಾಟೀಲ್, ಆತ್ಮ ಯೋಜನೆ ಸಹಾಯಕರಾದ ಸುಶ್ಮಿತಾ ಹುಚ್ಚೀರಪ್ಪ ಜೋಗಿನ, ವೆಂಕಟೇಶ ಸತ್ಯಪ್ಪನವರ, ಕಪ್ಪತ್ತಪ್ಪ ಸೋಂಪೂರ, ಹನುಮಪ್ಪ ತಳವಾರ, ಉದಯ ಗಂಗರಾತ್ರಿ, ಶರಣಪ್ಪ ಜೋಗಿನ ಮುಂತಾದವರಿದ್ದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್. ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಮಾತನಾಡಿ, ಪ್ರಸ್ತುತ ವರ್ಷ ಗದಗ-ಬೆಟಗೇರಿ ಹೋಬಳಿಯಲ್ಲಿ ಮುಂಗಾರು ಬೆಳೆಗಳಾದ ಹೆಸರು, ಶೇಂಗಾ ಬೆಳೆಗಳಿಗೆ ಹಳದಿ ನಂಜಾಣು ರೋಗದ ಲಕ್ಷಣಗಳು ಕಂಡುಬರುತ್ತಿವೆ. ಸರ್ಕಾರ ಮಧ್ಯ ಪ್ರವೇಶಿಸಿ ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳ ಮೂಲಕ ವರದಿ ಪಡೆದು ರೈತರಿಗೆ ಸೂಕ್ತ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here