ವಿಜಯಸಾಕ್ಷಿ ಸುದ್ದಿ, ಗದಗ: ಪಿಯುಸಿ ಎಪ್ರಿಲ್ 2025ರ ಮೌಲ್ಯಮಾಪನ ಸಂಭಾವನೆಯನ್ನು ಕೂಡಲೇ ಬಿಡುಗಡೆಗೊಳಿಸುವುದಾಗಿ ಶಾಲಾ ಶಿಕ್ಷಣ ಮತ್ತು ಪರೀಕ್ಷೆ ಮೌಲ್ಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಹೇಳಿರುವುದಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದಿಂದಲೇ ಡಿಬಿಟಿ ಮೂಲಕ ಮೌಲ್ಯಮಾಪನದ ಸಂಭಾವನೆಯನ್ನು ಅವರವರ ಬ್ಯಾಂಕ್ ಖಾತೆಗೆ ವಿತರಿಸುವ ವ್ಯವಸ್ಥೆ ಜಾರಿಗೆ ಮಾಡಿದ್ದು, ಪ್ರಾಯೋಗಿಕವಾಗಿ ಹತ್ತು ಜನ ಉಪನ್ಯಾಸಕರಿಗೆ ಡಿಬಿಟಿ ಮೂಲಕ ಬಿಡುಗಡೆಗೊಳಿಸಲಾಗಿದೆ. ಅದು ಸರಿಯಾಗಿ ತಲುಪಿದೆ ಎಂಬುದನ್ನು ದೃಢೀಕರಿಸಿದ ನಂತರ ಉಳಿದ ಸುಮಾರು 27 ಸಾವಿರ ಉಪನ್ಯಾಸಕರಿಗೆ ಒಂದೇ ದಿನದಲ್ಲಿ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಿದ್ದಾರೆ.
ಪ್ರಸ್ತುತ ಮಾಹಿತಿಯಂತೆ, ಸುಮಾರು 10 ಸಾವಿರ ಉಪನ್ಯಾಸಕರು ಮಾತ್ರ ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಕೊಂಡಿದ್ದು, ಉಳಿದವರು ಕೂಡ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕಾಗಿದೆ. ಕಳೆದ ವರ್ಷದ ಮೌಲ್ಯಮಾಪನದ ಬಾಕಿ ಸಂಭಾವನೆ ಹಣ 6.5 ಕೋಟಿ ರೂಗಳನ್ನೂ ತಕ್ಷಣ ಬಿಡುಗಡೆ ಮಾಡಲು ಶಾಲಾ ಪರೀಕ್ಷಾ ಮಂಡಳಿ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಎಸ್.ವಿ ಸಂಕನೂರ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಪರೀಕ್ಷೆ ಮೌಲ್ಯ ಮಂಡಳಿ ಭೇಟಿಯ ಸಂದರ್ಭದಲ್ಲಿ ಪದವಿಪೂರ್ವ ನೌಕರರ ಸಂಘದ ಕಾರ್ಯಾಧ್ಯಕ್ಷ ಬಿ.ವಾಯ್. ಗೌಡರ ಮತ್ತು ಉಪನ್ಯಾಸಕ ಎಸ್.ಎಸ್. ಬಿರಾದರ ಉಪಸ್ಥಿತರಿದ್ದರು.