ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ವಸತಿಯುತ ಕಿವುಡ ಮಕ್ಕಳ ಶಾಲೆಯಲ್ಲಿ ತೊಗಲು ಗೊಂಬೆಯಾಟ ಪ್ರದರ್ಶನ ನಡೆಯಿತು. ವಿಕಲ ಚೇತನರೆಲ್ಲ ಕುಳಿತು ಈ ತೊಗಲು ಗೊಂಬೆಯಾಟವನ್ನು ಕಂಡು ಖುಷಿ ಅನುಭವಿಸಿದರು.
ಕೊಪ್ಪಳ ಜಿಲ್ಲೆ ಮೊರನಾಳ ಗ್ರಾಮದ 96 ವರ್ಷ ವಯಸ್ಸಿನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ತಂಡ ಈ ಪ್ರದರ್ಶನವನ್ನು ನೀಡಿ ಸೈ ಎನ್ನಿಸಿಕೊಂಡಿತು. ಭೀಮವ್ವ ಅವರ ಮಗ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶಪ್ಪ ಶಿಳ್ಳಿಕ್ಯಾತರ ವಿರಾಟಪರ್ವ ಎಂಬ ಮಹಾಭಾರತದ ಕಥಾ ಭಾಗವನ್ನು ಮಕ್ಕಳಿಗೆ ತೊಗಲು ಗೊಂಬೆಯಾಟದ ಮೂಲಕ ತೋರಿಸಿ ಖುಷಿಪಡಿಸಿದರು.
ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭೀಮವ್ವಳ ಕುಟುಂಬ ಈ ಕಲೆಯನ್ನು ಪೋಷಿಸಿ, ಸಂರಕ್ಷಿಸಿ, ಪ್ರದರ್ಶಿಸುತ್ತ ಬಂದಿದೆ. ಗೊಂಬೆಯಾಟಕ್ಕೆ ತಕ್ಕಂತೆ ಕೇಶಪ್ಪ ನೀಡಿದ ಹಿನ್ನೆಲೆ ಧ್ವನಿ ಅರ್ಥಪೂರ್ಣವಾಗಿತ್ತು. ಅವರೊಂದಿಗೆ ಅವರ ಮೊಮ್ಮಕ್ಕಳೂ ಕೈಜೋಡಿಸಿದ್ದು ತಮ್ಮ ಕುಟುಂಬ ಈ ಕಲೆಯನ್ನು ಇನ್ನೂ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತೇವೆ ಎನ್ನುವ ಸಂದೇಶವನ್ನು ನೀಡುವಂತಿತ್ತು.
ಪ್ರದರ್ಶನ ನೀಡಿದ ಕಲಾವಿದರನ್ನು ಸಂಸ್ಥೆಯ ಪರವಾಗಿ ಆಡಳಿತಾಧಿಕಾರಿ ಎನ್.ಆರ್. ಗೌಡರ ಸನ್ಮಾನಿಸಿದರು. ಮುಖ್ಯಶಿಕ್ಷಕ ಎಲ್.ಎಂ. ತಳಬಾಳ, ಬಿ.ಎಸ್. ಗಾಣಿಗೇರ, ಎ.ಸಿ. ಮರಡಿಮಠ, ಎಸ್.ವಿ. ಪಾಟೀಲ, ಆರ್.ಕೆ. ಬಾಗವಾನ, ಎಂ.ವಿ. ಹರ್ಲಾಪೂರ, ವಿ.ಕೆ. ರೇಣುಕಮಠ, ಟಿ.ಬಿ. ಆಡೂರ, ಎ.ಎಸ್. ಚಿಕ್ಕಮಠ, ಎಸ್.ಎ. ಅರಮನಿ, ಶಿಕ್ಷಕಿ ಎಸ್.ಎಸ್. ಜುಟ್ಲದ, ಬಿ.ಬಿ. ಪಟ್ಟಣಶೆಟ್ಟಿ, ಎ.ಆರ್. ಹುಡೇದಗಟ್ಟಿ ಇದ್ದರು.