ಬೆಂಗಳೂರು:- ಸಾರಿಗೆ ಮುಷ್ಕರವನ್ನು 1 ದಿನ ಮುಂದೂಡುವಂತೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾ.ಕೆ.ಎಸ್.ಮುದಗಲ್, ನ್ಯಾ.ಎಂ.ಜಿ.ಎಸ್. ಕಮಲ್ ಅವರ ಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ಹಾಜರಾಗಿದ್ದ ದೀಕ್ಷಾ ಅಮೃತೇಶ್ ಅವರು, ಜುಲೈ 15ರಂದು ಪ್ರತಿಭಟನಾಕಾರರು ನೋಟಿಸ್ ನೀಡಿದ್ದಾರೆ. ಆದರೆ ಈಗ ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿಗೊಳಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಸರ್ಕಾರದ ಪರ ಹಾಜರಾದ ವಕೀಲೆ, ನಿಲೋಫರ್ ಅಕ್ಬರ್, ಸಿಎಂ ಸಿದ್ದರಾಮಯ್ಯನವರು ಸಾರಿಗೆ ನೌಕರರ ಜೊತೆ ಸಭೆ ನಡೆಸುತ್ತಿದ್ದು ಪ್ರಗತಿಯಲ್ಲಿದೆ ಎಂಬ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು.
ವಾದ ಅಲಿಸುವ ವೇಳೆ, ಇದು ಅರ್ಜಿದಾರರ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರವಾಗಿದ್ದು ಅವರ ಕಳಕಳಿಯನ್ನ ನೀವು ನೋಡಬೇಕು. ಸರ್ಕಾರ ಇನ್ನೊಬ್ಬರ ಹೆಗಲ ಮೇಲೆ ಇಟ್ಟು ಶೂಟ್ ಮಾಡಬಾರದು ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು. ಒಂದು ದಿನ ಸಾರಿಗೆ ಮುಷ್ಕರ ಮುಂದೂಡಬಹುದು ಎಂದು ಹೇಳಿ ಬುಧವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.