ವಿಜಯಸಾಕ್ಷಿ ಸುದ್ದಿ, ರೋಣ: ಜಿ.ಎಸ್. ಪಾಟೀಲರು ಕೇವಲ ಮತಕ್ಷೇತ್ರದ ಅಥವಾ ಜಿಲ್ಲೆಯ ನಾಯಕರಲ್ಲ. ಅವರು ರಾಜ್ಯದ ನಾಯಕರು. ಹೀಗಾಗಿ, ಕಾಂಗ್ರೆಸ್ ಪಕ್ಷದ ವರಿಷ್ಠರು ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಕುದರಿಮೋತಿ ಶ್ರೀಮಠದ ವಿಜಯ ಮಹಾಂತ ಶ್ರೀಗಳು ಹೇಳಿದರು.
ಅವರು ಪಟ್ಟಣದ ಆರ್‌ಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಮಾತೋಶ್ರೀ ಬಸಮ್ಮ ಸಂಗನಗೌಡ ಪಾಟೀಲ ಪಾಟೀಲರ 21ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವ ಸಂದರ್ಭದಲ್ಲಿ ಶಾಸಕ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.
ಜಿ.ಎಸ್. ಪಾಟೀಲರು ಸರ್ವ ಧರ್ಮದವರನ್ನು ಗೌರವಿಸುವ ಮತ್ತು ಪ್ರೀತಿಸುವ ವ್ಯಕ್ತಿ. ಅಲ್ಲದೆ, ಕಾಂಗ್ರೆಸ್ ಪಕ್ಷದ ಸಂಘಟನೆಗೆ ರಾಜ್ಯವಷ್ಟೇ ಅಲ್ಲದೆ, ದೆಹಲಿ ವರಿಷ್ಠರು ನೀಡಿರುವ ಜವಾಬ್ದಾರಿಗಳನ್ನು ಸಹ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮುಖ್ಯವಾಗಿ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂಬುದನ್ನು ಕಾಂಗ್ರೆಸ್ ಪಕ್ಷದ ನಾಯಕರು ಅರಿತು ಅವರಿಗೆ ಸಚಿವ ಸ್ಥಾನವನ್ನು ನಿಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತರನ್ನು ಗೌರವಿಸುವ ಪಕ್ಷ ಎಂದು ಕಾರ್ಯಕರ್ತರು ಹೇಳುತ್ತಾರೆ. ಜಿ.ಎಸ್. ಪಾಟೀಲರ ಕುಟುಂಬವೇ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಅದೆಷ್ಟು ವರ್ಷಗಳು ಕಳೆದವು ಎಂಬುದನ್ನು ಕಾರ್ಯಕರ್ತರು ತಿಳಿಯಬೇಕು. ಮುಖ್ಯವಾಗಿ ಪಕ್ಷದ ಮುಖಂಡರುಗಳು, ಅಭಿಮಾನಿಗಳು, ಕಾರ್ಯಕರ್ತರು ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಈ ಸಂಧರ್ಭದಲ್ಲಿ ಹಲವು ಮಠಾಧೀಶರು, ರಾಜಕೀಯ ಗಣ್ಯರು ಉಪಸ್ಥಿತರಿದ್ದರು.