ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶದ ಜನರು ನೆಮ್ಮದಿಯಿಂದ ಬದುಕಲು ಸೈನಿಕರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹಗಲು-ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ದೇಶದ ಗಡಿ ಕಾಯುತ್ತಿರುವುದೇ ಕಾರಣವಾಗಿದೆ. ಅಂತಹ ಸೈನಿಕರಿಗೆ ಎಲ್ಲರೂ ಋಣಿಯಾಗಿರಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದಲ್ಲಿ ಭಾರತೀಯ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹವಾಲ್ದಾರ ಶರಣಪ್ಪ ರುದ್ರಪ್ಪ ಬೂದಿಹಾಳ ಅವರ ಸ್ವಾಗತ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟç ರಕ್ಷಣೆಗಾಗಿ ಸೈನಿಕರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ದೇಶದ ಸೈನಿಕರ ಸೇವೆ ಅನನ್ಯವಾದುದು. ನಿವೃತ್ತ ನಂತರ ಸ್ವಗ್ರಾಮಕ್ಕೆ ಬರುವ ಸೈನಿಕರನ್ನು ಸನ್ಮಾನಿಸುವುದರೊಂದಿಗೆ ಅವರು ಸೈನಿಕರ ವೃತ್ತಿಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಎಲ್ಲರಲ್ಲಿ ದೇಶಭಕ್ತಿ ಮೂಡುತ್ತದೆ ಎಂದರು.
ಪಟ್ಟಣದ ಪಂಪ ವೃತ್ತದಿಂದ ಪ್ರಮುಖ ಮಾರ್ಗದ ಮೂಲಕ ತೆರೆದ ವಾಹನದಲ್ಲಿ ನಿವೃತ್ತ ಸೈನಿಕ ಶರಣಪ್ಪ ಬೂದಿಹಾಳ ದಂಪತಿಗಳನ್ನು ಮೆರವಣಿಗೆ ಮಾಡಿ ಗೌರವಿಸಲಾಯಿತು.
ಈ ವೇಳೆ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಯೋಧರೆಂದರೆ ಅವರು ಬರೀ ವ್ಯಕ್ತಿಗಳಲ್ಲ. ಅವರು ದೇಶದ ಶಕ್ತಿ, ಕೀರ್ತಿ ಮತ್ತು ನಮ್ಮ ಹೆಮ್ಮೆ. ಅವರಿಂದಾಗಿ ಭಾರತ ಎಂದೆಂದಿಗೂ ಸುರಕ್ಷಿತ. ಪ್ರತಿಯೊಬ್ಬರೂ ಸೈನಿಕರನ್ನು ಗೌರವಿಸಬೇಕು ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿ.ಎಸ್. ಹಿರೇಮಠ, ಮಾಂತೇಶ ಸುಣಗಾರ, ಎಸ್.ಎಫ್. ಹಳ್ಯಾಳ, ರಮೇಶ ಹುಲಸೋಗಿ, ಹನಮಂತಗೌಡ ಶೀಲವಂತರ, ಬಿ.ಎಸ್. ಹಿರೇಮಠ, ಈರಪ್ಪ ಸಂಕ್ಲಿಪುರ, ರಮೇಶ ಹರಕೇರಿ, ಶೇಖರಪ್ಪ ತಹಸೀಲ್ದಾರ, ಟಿ.ಆಯ್. ಪೂಜಾರ, ಸುರೇಶ ಹುಲಿಕಟ್ಟಿ, ಹನಮಂತಗೌಡ ಪಾಟೀಲ ಸೇರಿದಂತೆ ಗೆಳೆಯರ ಬಳಗ, ಬಂಧುಗಳು ಪಾಲ್ಗೊಂಡಿದ್ದರು.
ಗೌರವ ಸ್ವೀಕರಿಸಿದ ಶರಣಪ್ಪ ಬೂದಿಹಾಳ ಮಾತನಾಡಿ, ಸೇವಾ ನಿವೃತ್ತಿ ಹೊಂದಿದರೂ ದೇಶ ಸೇವೆಯಿಂದ ನಿವೃತ್ತಿಯಾಗಿಲ್ಲ. ದೇಶ ರಕ್ಷಣೆಗೆ ಯಾವಾಗ ಕರೆದರೂ ಹೋಗಲು ಸಿದ್ಧ. ದೇಶ ಸೇವೆ ದೇವರ ಸೇವೆ ಇದ್ದಂತೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆಗೆ ಸೇರಿ ದೇಶ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.