ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಕೀಟ ಬಾಧೆಯ ಅಬ್ಬರಕ್ಕೆ ಸಂಪೂರ್ಣ ಹಾಳಾಗುತ್ತಿದೆ. ಸದ್ಯ ಫಲಭರಿತ/ಕಟಾವು ಹಂತ ತಲುಪಿರುವ ಹೆಸರು ಬೆಳೆಗೆ ಕೊಂಬಿನ ಹುಳದ ಹಾವಳಿ ಹೆಚ್ಚಾಗಿದೆಯಲ್ಲದೆ, ಬೂದು, ತಾಮ್ರರೋಗಕ್ಕೆ ತುತ್ತಾಗಿದ್ದು ದುಬಾರಿ ಬೆಲೆಯ ಕ್ರಿಮಿನಾಶಕವೂ ನಿಷ್ಪçಯೋಜಕವಾಗುತ್ತಿದೆ.
ಪ್ರತಿವರ್ಷ ಹೆಸರು ಬೆಳೆಯಿಂದ ಹಾನಿ ಅನುಭವಿಸುತ್ತಿದ್ದರೂ ರೈತರಿಗೆ ಹೆಸರಿನ ಮೇಲಿನ ಮೋಹ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಬೆಳೆಗೆ ರೋಗ ತಪ್ಪಿದ್ದಲ್ಲ ಎಂದು ಗೊತ್ತಿದ್ದರೂ ಮತ್ತೆ ಹೊಸ ಪ್ರಯೋಗ, ಪ್ರಯತ್ನ ಮಾಡಿದರಾಯಿತು ಎಂದ ರೈತರ ಪ್ರಯತ್ನ, ಆಸೆ-ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಏನೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಅಸಮರ್ಪಕ ಮಳೆ, ಹವಾಮಾನ ವೈಪರಿತ್ಯ, ಪ್ರತಿ ವರ್ಷಕ್ಕಿಂತ ಹೆಚ್ಚಿರುವ ಕೀಟಬಾಧೆಯಿಂದ ಬೆಳೆ ಹಾಳಾಗುತ್ತಿದೆ.
ಕೀಟ/ರೋಗಬಾಧೆ ನಿಯಂತ್ರಣಕ್ಕೆ 2 ಬಾರಿ ಸಿಂಪರಣೆ ಮಾಡುತ್ತಿದ್ದ ರೈತರು ಈಗ 4-5 ಬಾರಿ ಸಿಂಪರಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ದುಬಾರಿ ಬೆಲೆ ಅಂದರೆ ಒಮ್ಮೆ 1 ಎಕರೆ ಕ್ರಿಮಿನಾಶಕಕ್ಕೆ 5 ಸಾವಿರರೂ ಖರ್ಚು ಮಾಡಿದರೂ ಪರಿಣಾಮಕಾರಿಯಾಗುತ್ತಿಲ್ಲ. ಕೀಟಗಳ ಅಬ್ಬರಕ್ಕೆ ಮಾರಕ ಕೀಟನಾಶಕಗಳೂ ನಿಷ್ಪçಯೋಜಕವಾಗುತ್ತಿವೆ. ಕೀಟಗಳ ನಿಯಂತ್ರಣಕ್ಕಾಗಿ ರೈರು ಪ್ರಮಾಣ ಮೀರಿ ಕೀಟನಾಶಕಗಳನ್ನು ಬಳಸುತ್ತಿದ್ದು, ಇದು ಫಲಭರಿತ ಬೆಳೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಕಳಪೆ ಔಷಧಿ ಕೊಡುತ್ತಿದ್ದೀರಿ ಎಂದು ರೈತರು ಕೃಷಿ ಇಲಾಖೆ ಹಾಗೂ ಮಾರಾಟಗಾರರೊಂದಿಗೆ ನಿತ್ಯ ಜಗಳ ಮಾಡುತ್ತಿದ್ದಾರೆ. ಪರಿಣಾಮವಾಗಿ, ಕಳೆದ 8-10 ದಿನಗಳಿಂದ ಕ್ರಿಮಿನಾಶಕ ಮಾರಾಟಗಾರರರು ಕೀಟನಾಶಕ ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೊಟ್ಟರೂ, ಕೀಟಬಾಧೆ ಕಡಿಮೆಯಾಗದಿದ್ದರೆ ನಾವು ಜವಾಬ್ದಾರರಲ್ಲ ಎಂದು ಮೊದಲೇ ಹೇಳುತ್ತಿದ್ದಾರೆ. ಕೀಟಗಳು ಈಗ ಹೆಸರು ಬೆಳೆಯ ಎಲೆಯಷ್ಟೇ ಅಲ್ಲದೆ ಹೂಗೊಂಚಲು, ಹೀಚು, ಕಾಯಿ ತಿಂದು ಬೆಳೆ ಹಾಳು ಮಾಡಿದ್ದು ಬೆಳೆ ಬರಡಾಗಿದೆ.
ಗೋವಿನ ಜೋಳದ ನಂತರ ಹೆಚ್ಚು ಕ್ಷೇತ್ರದಲ್ಲಿ ಅಂದರೆ ಲಕ್ಷ್ಮೇಶ್ವರ ಸೇರಿ ತಾಲೂಕಿನ ರಾಮಗೇರಿ, ಯಳವತ್ತಿ, ಯತ್ನಳ್ಳಿ, ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ, ಗೊಜನೂರ ಸೇರಿ ಒಟ್ಟು 15 ಸಾವಿರ ಎಕರೆ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಜೂನ್ ತಿಂಗಳಲ್ಲಿ ಅಸಮರ್ಪಕ ಮಳೆಯಿಂದ ಬಿತ್ತನೆ ಸಮಯವದಲ್ಲಿ ವ್ಯತ್ಯಾಸವಾಗಿತ್ತು. ನಂತರ ಜುಲೈನಲ್ಲಿ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣದಿಂದ ಕೀಟಬಾಧೆ ಹೆಚ್ಚಾಯಿತು. ಆಗಸ್ಟ್ ಕೊನೆಯ ವಾರದಲ್ಲಿ ಕಟಾವು ಮಾಡುವ ಮೊದಲೇ ಬೆಳೆ ಹಾಳಾಗಿರುವುದು ರೈತರ ಕನಸು ನುಚ್ಚುನೂರಾಗಿದೆ.
“ಬೀಜ, ಗೊಬ್ಬರ, ಕ್ರಿಮಿನಾಶಕ ನಿರ್ವಹಣೆ ವೆಚ್ಚ ಸೇರಿ ಪ್ರತಿ ಎಕರೆಗೆ 30 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಫಸಲು ಬರುತ್ತದೆ ಎಂಬ ಭರವಸೆಯಿಂದ ಗೊಬ್ಬರ ಅಂಗಡಿಯಲ್ಲಿ ಉದ್ರಿ ಬೀಜ, ಗೊಬ್ಬರ, ಕ್ರಿಮಿನಾಶಕ ಖರೀದಿ, ದಲಾಲಿ ಅಂಗಡಿಯಲ್ಲಿ ಕೈಗಡ ಸಾಲ ಮಾಡಿದ್ದಾರೆ. ಈಗ ಸಾಲ ತೀರಿಸುವುದು ಹೇಗೆಂಬ ಚಿಂತೆಯಲ್ಲಿ ಒದ್ದಾಡುತ್ತಿದ್ದಾರೆ. ಕೃಷಿ ಇಲಾಖೆಯಿಂದಲೇ ಹೆಸರಾಂತ ಕಂಪನಿಗಳ, ಗುಣಮಟ್ಟದ ಕ್ರಿಮಿನಾಶಕ ಸಿಗುವಂತಾಗಬೇಕು. ಬೆಳೆವಿಮೆ ಪಾವತಿಸಿದ ರೈತರಿಗೆ ವಿಮೆ, ಬೆಳೆಹಾನಿ ಪರಿಹಾರ ಕಲ್ಪಿಸುವಲ್ಲಿ ಕೃಷಿ ಇಲಾಖೆ ಜವಾಬ್ದಾರಿ ನಿಭಾಯಿಸಬೇಕು. ಅಳಿದುಳಿದ ಫಸಲಿಗೆ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದರೆ ಕೂಡಲೇ ಬೆಂಬಲ ಬೆಲೆಯಡಿ ಖರೀದಿಸುವಂತಾಗಬೇಕು”
– ಸೋಮನಗೌಡ್ರ ಪಾಟೀಲ,
ಮಂಜುನಾಥ ನರೆಗಲ್,
ರಾಜಣ್ಣ ಹವಳದ-ರೈತರು.
“ಹೂ, ಹೀಚು ಬಿಡುವ ಹಂತದಲ್ಲಿ ಅತಿಯಾದ ಕ್ರಿಮಿನಾಶಕ ಬಳಕೆ ಬೆಳೆಯ ಮೇಲೆ ದುಷ್ಪರಿಣಾಮ ಬೀರಿದೆ. ಹಸಿರು, ಕರಿ ಕೀಟ, ಕೊಂಬಿನಹುಳು ಪ್ರಮಾಣ ಹೆಚ್ಚಿದೆ. ಪ್ರಾರಂಭದಲ್ಲಿಯೇ ಎಲೆಗಳ ಕೆಳಗಿರುವ ಕೀಟವನ್ನು ಸೂಕ್ಷ್ಮವಾಗಿ ಗಮನಿಸಿ ಕ್ರಮ ಕೈಗೊಳ್ಳಬೇಕು. ಬೆಳೆ ಬದಲಾವಣೆ, ಮಣ್ಣು ಪರೀಕ್ಷೆ, ಬಿತ್ತನೆ ಪೂರ್ವದಲ್ಲಿ ಸರಿಯಾದ ಬೀಜೋಪಚಾರ ಅಗತ್ಯವಾಗಿದೆ. ಬೆಳೆಯ ಸ್ಥಿತಿಗತಿ, ಅವಧಿ ಪರಿಗಣಿಸಿ ಕ್ರಿಮಿನಾಶಕ ಬಳಸಬೇಕಾಗುತ್ತದೆ ಅದಕ್ಕಾಗಿ ರೈತರು ಜಾಗ್ರತೆ ವಹಿಸಬೇಕಾಗುತ್ತದೆ”
– ಚಂದ್ರಶೇಖರ ನರಸಮ್ಮನವರ.
ಕೃಷಿ ಅಧಿಕಾರಿಗಳು.