ಬಾಗಲಕೋಟೆ: ಬಾಗಲಕೋಟೆಯ ಪ್ರತಿಭಾವಂತ ವಿದ್ಯಾರ್ಥಿನಿ ಜ್ಯೋತಿ ಕಣಬೂರ ಅವರ ಶಿಕ್ಷಣಕ್ಕೆ ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ನೆರವು ನೀಡಿದ್ದಾರೆ. ಹೌದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರ್ ಅವರು ಜಮಖಂಡಿಯಲ್ಲಿನ ಬಿಎಲ್ಡಿ ಕಾಲೇಜ್ನಲ್ಲಿ ಪ್ರಸ್ತುತ ಬಿಸಿಎ ಪ್ರಥಮ ಸೆಮಿಸ್ಟರ್ನಲ್ಲಿ ಓದುತ್ತಿದ್ದಾರೆ.
ಜ್ಯೋತಿ ಕಣಬೂರ್ ದ್ವಿತೀಯ ಪಿಯುಸಿ ಕಾಮರ್ಸ್ ನಲ್ಲಿ ಶೇ 85 ರಷ್ಟು ಅಂಕ ಪಡೆದಿದ್ದರು. ಇವರಿಗೆ ಬಿಸಿಎ ಓದಬೇಕು ಎಂಬ ಆಸೆ ಇತ್ತು. ಆದರೆ, ಜ್ಯೋತಿ ಕಣಬೂರ್ ಪೋಷಕರು ಕಡುಬಡವರಾಗಿದ್ದು, ಬಿಸಿಎ ಕಾಲೇಜಿಗೆ ದಾಖಲಿಸಲು ಹಣ ಇಲ್ಲದೆ ಪರದಾಡುತ್ತಿದ್ದರು. ಮಗಳ ವಿದ್ಯಾಭ್ಯಾಸಕ್ಕೆ ಜ್ಯೋತಿ ತಂದೆ ತೀರ್ಥಯ್ಯ ಕಣಬೂರ ಹಣ ಹೊಂದಿಸಲಾಗದೆ ಕಷ್ಟ ಪಡುತ್ತಿದ್ದರು.
ಈ ವಿಷಯ ಅದೇ ಊರಿನ ಅನಿಲ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿದೆ. ಈ ಸಂದರ್ಭದಲ್ಲಿ ಅನಿಲ ಹುಣಸೀಕಟ್ಟಿ ಅವರ ಸ್ನೇಹಿತರು ಐಪಿಎಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಅನಿಲ ಅವರು ವಿಷಯ ತಿಳಿಸಿದ್ದಾರೆ. ಅನಿಲ್ ಅವರ ಸ್ನೇಹಿತರು ಹಣದ ಅವ್ಯಶಕತೆ ಇರುವ ವಿಚಾರವನ್ನು ರಿಷಭ್ ಪಂತ್ ಅವರ ಗಮನಕ್ಕೆ ತಂದಿದ್ದಾರೆ. ಆಗ, ರಿಷಭ್ ಪಂತ್ ಅವರು ಜ್ಯೋತಿಯ ಬಿಸಿಎ ವ್ಯಾಸಂಗಕ್ಕೆ 40 ಸಾವಿರ ರೂ. ನೀಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಜ್ಯೋತಿ ರಿಷಬ್ ಸರ್ ಉಪಕಾರ ಮರೆಯುವಂತಿಲ್ಲ, ನಾನು ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸುತ್ತೇನೆ. ಅವರ ನೆರವಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.