ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಯಳವತ್ತಿ, ಗೊಜನೂರ, ಬಟ್ಟೂರ, ಶೆಟ್ಟಿಕೇರಿ ಭಾಗದಲ್ಲಿನ ವಿಪರೀತ ಕೀಟಬಾಧೆಯಿಂದ ಹಾನಿಗೊಳಗಾದ ಹೆಸರು ಬೆಳೆಯನ್ನು ಬುಧವಾರ ಕೃಷಿ ವಿಜ್ಞಾನಿಗಳು ಪರಿಶೀಲಿಸಿದರು.
ತಾಲೂಕಿನಾದ್ಯಂತ ಈ ವರ್ಷ ಮೆಕ್ಕೆ ಜೋಳದ ಹೊರತಾಗಿ ಹೆಸರು ಬೆಳೆದಿದ್ದಾರೆ. ಆದರೆ ಹವಾಮಾನ ವೈಪರಿತ್ಯ, ಜಿಟಿಜಿಟಿ ಮಳೆಯಿಂದ ಕೀಟಗಳ ಹಾವಳಿ ಹೆಚ್ಚಾಗಿ ಪೂರಕ ವಾತಾವರಣ ಇಲ್ಲದ್ದರಿಂದ ನಿಯಂತ್ರಣ ಸಾಧ್ಯವಾಗದೇ ಹೆಸರು ಬೆಳೆ ಕೀಟಬಾಧೆಗೆ ತುತ್ತಾಗಿದೆ. ದುಬಾರಿ ಬೆಲೆಯ ಕ್ರಿಮಿನಾಶಕ ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದೇ ರೈತರು ಕೈಚೆಲ್ಲಿ ಕುಳಿತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳೆ ಪರಿಶೀಲನೆಗೆ ಆಗಮಿಸಿದ ಕೃಷಿ ವಿಜ್ಞಾನಿಗಳ ತಂಡದವರು ರೈತರಿಗೆ ಮಾಹಿತಿ ನೀಡಿದರು. ಈ ವೇಳೆ ಸಸ್ಯಕೀಟ ಶಾಸ್ತ್ರಜ್ಞ ಡಾ. ಸಿ.ಎಂ. ರಫಿ ವಿವರಣೆ ನೀಡಿ, ಈ ವರ್ಷ ಮುಂಗಾರಿನ ಉತ್ತಮ ಮಳೆಯಿಂದ ಹೆಸರು ಬೆಳೆ ಸಮೃದ್ದವಾಗಿಯೇ ಬೆಳೆಯಿತು. ಆದರೆ ಮೋಡ ಮುಸುಕಿದ ವಾತಾವರಣ, ತುಂತುರು ಮಳೆಯಿಂದ ಕೀಟಬಾಧೆ ಹೆಚ್ಚಾಯಿತು. ಮುಖ್ಯವಾಗಿ ಹೆಲಿಕೋವರ್ಪಾ ಆರ್ಮಿಗೇರಾ ಎಂಬ ವಿನಾಶಕಾರಿ ಕೀಟ ಬೆಳೆಯ ಮೊಗ್ಗು, ಹೂವು ಬಿಡುವ ಹಂತದಲ್ಲಿಯೇ ಬೆಳೆಯನ್ನು ತೀವ್ರವಾಗಿ ಬಾಧಿಸುತ್ತದೆ. ರೈತರು ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಹತೋಟಿಗಾಗಿ ಕಾಯಿ ತಿನ್ನುವ ಕೀಡೆಗಳ ಕ್ಲೋರಾಂಥೋನೀಲಿಪ್ರೋಲ್ 0.2 ಎಂಎಲ್ ಅಥವಾ ಅಂಪ್ಲಿಗೋ 0.4 ಎಂಎಲ್ ಲೀಟರ್ ನೀರಿಗೆ ಅಥವಾ ಕ್ಲೋರಾಂಥೋನೀಲಿಪ್ರೋಲ್ + ಲ್ಯಾಂಬ್ಲಾಸೈಲೊಥ್ರಿನ್ 0.4 ಎಂಎಲ್ ಲೀಟರ ನೀರಿಗೆ ಅಥವಾ ಸ್ಟೈನೋಸೈಡ 45 ಎಸ್‌ಸಿ 0.2 ಎಂಲ್ ಲೀ ನೀರಿಗೆ ಅಥವಾ ಪ್ಯೂಬೆಂಡಿಮೈಡ 20% ಡಜಿ 0.2 ಗ್ರಾಂ/ಲೀ ಅಥವಾ ಸೈನೆಟೋರಾಮ್ 11.7 ಎಸ್‌ಸಿ 0.4 ಎಂಎಲ್/ ಲೀ ನೀರಿಗೆ ಸಿಂಪರಣೆ ಮಾಡಬೇಕು.
ಗೋವಿನ ಜೋಳದಲ್ಲಿ ಸೈನಿಕ ಹುಳುಭಾದೆ ಹತೋಟಿಗಾಗಿ ಇಮಾಮೆಕ್ಟಿನ್ ಬೆಂಜೊಯೆಟ 5 ಎಸ್‌ಜಿ 0.3 ಗ್ರಾಂ/ಲೀ ನೀರಿಗೆ ಅಥವಾ ಕ್ಲೋರಾಂಥೋನೀಲಿಪ್ರೋಲ್ 18.5% ಎಸ್‌ಸಿ, 0.4 ಎಂಎಲ್ ಲೀಟರ ನೀರಿಗೆ ಅಥವಾ, ಸೈನೆಟೋರಾಮ್ 11.7 ಎಸ್‌ಸಿ ಹಾಗೂ ಪ್ರತಿ ಎಕರೆಗೆ 10 ಮೋಹಕ ಬಲೆಗಳನ್ನು ಅಳವಡಿಸುವುದು. ರೈತರು ಪ್ರತಿ ಎಕರೆಗೆ ಕಡ್ಡಾಯವಾಗಿ 200 ಲೀ ದ್ರಾವಣ ಸಿಂಪರಣೆ ಮಾಡಬೇಕು. ಗಿಡದ ಎಲ್ಲಾ ಭಾಗಗಳಿಗೆ ತಲುಪುವ ಹಾಗೆ ಸಿಂಪರಣೆ ಮಾಡಬೇಕು. ಈ ಕೀಟಗಳು ರಾತ್ರಿಯಲ್ಲಿ ದಾಳಿ ಮಾಡುವ ಗುಣ ಹೊಂದಿರುವದರಿಂದ ಔಷಧ ಸಿಂಪರಣೆಯನ್ನು ಸಾಯಂಕಾಲ 4 ಗಂಟೆಯ ನಂತರ ಅಥವಾ ಬೆಳಗ್ಗೆ 10 ಗಂಟೆಯ ಒಳಗಡೆ ಮಾಡುವುದರಿಂದ ಹತೋಟಿ ಮಾಡಬಹುದು ಎಂದು ವಿವರಿಸಿದರು.
ಅಣ್ಣಿಗೇರಿ ಕೃಷಿ ಸಂಶೋಧನಾ ಕೇಂದ್ರದ ಬೇಸಾಯ ಶಾಸ್ತ್ರಜ್ಞ ಎಸ್.ವೈ. ಬಾಲ್ಕುಂದೆ, ತಳಿ ವರ್ಧಕರಾದ ಬಿ.ಎನ್. ಮೋಟಗಿ, ಆರ್.ಎಸ್. ಅಣ್ಣಿಗೇರಿ, ಸಹಾಯಕ ಕೃಷಿ ನಿರ್ದೇಶಕರಾದ ಮೇಘನಾ ಎಂ.ನಾಡಿಗೇರ, ಕೃಷಿ ಅಧಿಕಾರಿ ಎಸ್.ಬಿ. ಲಮಾಣಿ, ಮಹಾಬಲೇಶ್ವರ ಪೂಜಾರ, ರೈತರಾದ ಚನ್ನಬಸಪ್ಪ ಷಣ್ಮುಖಿ, ಬಿ.ಎಸ್. ಪಾಟೀಲ, ವಿಜಯಪ್ರಕಾಶ ಬೂದಿಹಾಳ ಮುಂತಾದವರಿದ್ದರು.
ಚನ್ನಬಸಪ್ಪ ಷಣ್ಮುಖಿ ಮಾತನಾಡಿ, ಈ ವರ್ಷ ರೈತರ ಪ್ರಮುಖ ವಾಣಿಜ್ಯ ಬೆಳೆ ಹೆಸರಿಗೆ ದುಬಾರಿ ಬೆಲೆಯ ಕ್ರಿಮಿನಾಶಕವನ್ನು ನಾಲ್ಕೈದು ಬಾರಿ ಸಿಂಪಡಿಸಿದರೂ ಕೀಟಭಾದೆ, ರೋಗಬಾಧೆಯಿಂದ ಸಂಪೂರ್ಣ ಹಾಳಾಗಿದೆ. ಸರ್ಕಾರ ಬೆಳೆಹಾನಿ, ಬೆಳೆವಿಮೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.