ವಿಜಯಸಾಕ್ಷಿ ಸುದ್ದಿ, ಗದಗ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್ ಗದಗ ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 15ರಿಂದ 19ರವರೆಗೆ ಶ್ರೀ ಸ್ವಾಮಿ ವಿವೇಕಾನಂದ ಸಭಾ ಭವನ ಹಾಗೂ ಕೆ.ಹೆಚ್. ಪಾಟೀಲ ಸಭಾಭವನ ಗದಗದಲ್ಲಿ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸದರಿ ವಸ್ತು ಪ್ರದರ್ಶದಲ್ಲಿ ಗ್ರಾಮೀಣ ಸೂಕ್ಷ್ಮ ಮತ್ತು ಸಣ್ಣ/ಗುಡಿ ಕೈಗಾರಿಕೆಗಳಿಗೆ, ವಿಶೇಷವಾಗಿ ಗ್ರಾಮೀಣ ಮತ್ತು ನಗರ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಪ್ರಚಾರ ನೀಡಿ ಮಾರುಕಟ್ಟೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ವಸ್ತು ಪದರ್ಶನದಲ್ಲಿ ಒಟ್ಟು 35 ಮಳಿಗೆಗಳನ್ನು ಕಾಯ್ದಿರಿಸಲಾಗಿದೆ. ವಸ್ತು ಪ್ರದರ್ಶನಕ್ಕೆ ಬೆಳಿಗ್ಗೆ 9.30ರಿಂದ ರಾತ್ರಿ 9ರವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ಈ ವಸ್ತುಪದರ್ಶನದಲ್ಲಿ ಗ್ರಾಮೀಣ ಸೂಕ್ಷ್ಮ ಮತ್ತು ಸಣ್ಣ / ಗುಡಿ ಕೈಗಾರಿಕೆಗಳು/ಮಹಿಳಾ ಉದ್ಯಮಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಕೋರಿದೆ.
ಆಸಕ್ತ ಉದ್ದಿಮೆದಾರರು ಮಳಿಗೆಯನ್ನು ಪಡೆಯಲು ಉಪ ನಿರ್ದೇಶಕರು (ಗ್ರಾ.ಕೈ) ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಗದಗ ಇವರ ಕಚೇರಿಗೆ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಆಗಸ್ಟ್ 13ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ್, ಗದಗ ಈ ಕಚೇರಿಯ ಮುಖ್ಯಸ್ಥರನ್ನು ಅಥವಾ ಕಚೇರಿ ದೂರವಾಣಿ ಸಂಖ್ಯೆ: 08372-220506 ಸಂಪರ್ಕಿಸಬಹುದಾಗಿದೆ.
ವಸ್ತು ಪ್ರದರ್ಶನದಲ್ಲಿ ಕರಕುಶಲ, ಖಾದಿ ಮತ್ತು ಜವಳಿ ಉತ್ಪನಗಳು, ಬಿದಿರು, ಬೆತ್ತದ ಉತ್ಪನಗಳು, ಬ್ಯಾಡಗಿ ಖಾರದ ಪುಡಿ, ಮಸಾಲಾ ಉತ್ಪನಗಳು ಹಾಗೂ ಆಹಾರ ಉತ್ಪನಗಳು, ಗ್ರಾಮೀಣ ಕುಂಬಾರಿಕೆ, ಟೆರಾಕೋಟ್ ಕಟ್ಟಿಗೆಯ ಗೊಂಬೆಗಳು, ಆಟಿಕೆ ಸಾಮಗ್ರಿಗಳು ಮತ್ತು ಅಗರ ಬತ್ತಿ, ರೇಷ್ಮೆ ಕಸೂತಿ ಸೀರೆಗಳು, ಚರ್ಮದ ಉತ್ಪನ್ನಗಳು, ಸೆಣಬಿನ ಬ್ಯಾಗ್, ಕಾಟನ್ ಬ್ಯಾಗ್, ವಿಶೇಷವಾಗಿ ಗದಗ ಶಿಗ್ಲಿ ಮತ್ತು ಗಜೇಂದ್ರಗಡದ ಕೈಮಗ್ಗ ಉತ್ಪನಗಳು ಸಾರ್ವಜನಿಕರ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ.