ಕೆನಡಾ:- ಕೆನಡಾದ ಒಂಟಾರಿಯೊದಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ್ದ 21 ವರ್ಷದ ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿ ಜೀವ ತೆಗೆದಿದ್ದಾರೆ.
ಹರ್ಸಿಮ್ರತ್ ರಾಂಧವ (21) ಮೃತ ವಿದ್ಯಾರ್ಥಿನಿ. 32 ವರ್ಷದ ಜರ್ಡೈನ್ ಫೋಸ್ಟರ್ ಗುಂಡು ಹಾರಿಸಿದ ಆರೋಪಿ. ಈತನನ್ನು ಕೆನಡಾದ ಒಂಟಾರಿಯೊದ ನಯಗಾರ ಫಾಲ್ಸ್ ಬಳಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಈತನ ಮೇಲೆ ಈ ಮೊದಲು ಎರಡು ಇಂತಹದ್ದೇ ಪ್ರಕರಣಗಳು ಇರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವ ಅವರು ಕೆನಡಾದಲ್ಲಿ ಫಿಸಿಯೋಥೆರಫಿ ಕೋರ್ಸ್ ಅನ್ನು ಮೊಹಾಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಏಪ್ರಿಲ್ 17 ರಂದು ಅಪ್ಪರ್ ಜೇಮ್ಸ್ ಸ್ಟ್ರೀಟ್ ಹಾಗೂ ಸೌತ್ ಬೆಂಡ್ ರೋಡ್ನಲ್ಲಿ ಬಸ್ ಇಳಿದು ರಸ್ತೆ ದಾಟಲು ನಿಂತಿದ್ದಾಗ ವಿದ್ಯಾರ್ಥಿನಿಗೆ ಬುಲೆಟ್ ತಗುಲಿತ್ತು. ತಕ್ಷಣ ಆಕೆಯನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗಿದೆ.