ನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಇಂದು ಮತ್ತೊಂದು ನೋವಿನ ಘಟನೆ ನಡೆದಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾತ್ರೋ ರಾತ್ರಿ ನೆಲಸಮ ಮಾಡಲಾಗಿದೆ.
‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರ ಸ್ಮಾರಕವು ಮೈಸೂರಿನಲ್ಲಿ ನಿರ್ಮಾಣವಾಗಿದೆ. ಆದರೆ ಅವರ ಅಂತ್ಯಕ್ರಿಯೆ ನಡೆಸಿದಂತಹ ಪುಣ್ಯಭೂಮಿಯು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿತ್ತು. ಅಲ್ಲಿಯೇ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದರು. ಆದರೆ ಇದೀಗ ಆ ಜಾಗವನ್ನು ತೆರವು ಮಾಡಲಾಗಿದ್ದು, ಇದು ವಿಷ್ಣು ಅಭಿಮಾನಿಗಳಿಗೆ ಆಘಾತವನ್ನು ನೀಡಿದೆ.
2009ರ ಡಿಸೆಂಬರ್ 30ರಂದು ವಿಷ್ಣು ನಿಧನರಾದಾಗ ಅವರ ಅಂತ್ಯಕ್ರಿಯೆಯನ್ನು ಹಿರಿಯ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇರಿದ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ನೆರವೇರಿಸಲಾಗಿತ್ತು. ಅಂತ್ಯಕ್ರಿಯೆ ಜಾಗವನ್ನು ಅಭಿಮಾನಿಗಳು ವಿಷ್ಣು ಪುಣ್ಯಭೂಮಿ ಎಂದು ಪೂಜಿಸುತ್ತಿದ್ದರು. ಇದೀಗ ಆ ಜಾಗವನ್ನೇ ತೆರವುಗೊಳಿಸಲಾಗಿದೆ.
ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲೇ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಹೋರಾಟ ಮಾಡಲಾಗುತ್ತಿತ್ತು. ಅಭಿಮಾನಿಗಳೇ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬಾಲಕೃಷ್ಣ ಅವರ ಕುಟುಂಬಸ್ಥರು ಅದಕ್ಕೆ ಒಪ್ಪಿರಲಿಲ್ಲ. ಇದೀಗ ಕೋರ್ಟ್ ಆದೇಶದೊಂದಿಗೆ ರಾತ್ರೋರಾತ್ರಿ ಪುಣ್ಯಭೂಮಿಯಲ್ಲಿದ್ದ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಲಾಗಿದೆ.
ಇನ್ನೂ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್, “ಕೊನೆಗೂ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಿಬಿಟ್ಟರು! 11 ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು. ಡಾ. ವಿಷ್ಣುವರ್ಧನ್ ಅವರಿಗೆ ಹತ್ತು ಗುಂಟೆ ಜಾಗ ಕೊಡಲಾಗದ ನಾಚಿಕಗೇಡಿನ ಸರ್ಕಾರ ಇದು. ಅದರ ಮೇಲೆ ನಂಬಿಕೆ ಕಳೆದುಕೊಂಡು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಕೋರ್ಟ್ ಅತ್ಯಂತ ಸ್ಪಷ್ಟವಾಗಿ ಹೇಳಿದ್ದು. ಈ ವಿಷಯವಾಗಿ ಅಭಿಮಾನಿಗಳಾದ ನಿಮಗೆ ಯಾವುದೇ ಹಕ್ಕಿಲ್ಲ. ಅವರ ಕುಟುಂಬ ಅಥವಾ ಸರ್ಕಾರವಷ್ಟೇ ಕೇಳಬೇಕು ಎಂದುಬಿಟ್ಟಿತು” ಅಂತ ಪೋಸ್ಟ್ ಹಾಕಿದ್ದಾರೆ.