ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತೀಯ ಪರಂಪರೆಯಲ್ಲಿ ಆಷಾಢ ಮುಗಿದು ಶ್ರಾವಣ ಪ್ರಾರಂಭವಾಯಿತೆಂದರೆ ಹಬ್ಬಗಳು ಸಾಲುಗಟ್ಟಿ ನಿಲ್ಲುತ್ತವೆ. ಯಾವಾಗ ದೀಪಾವಳಿ ಮುಗಿಯುತ್ತದೆಯೋ ಅಂದಿಗೆ ಹಬ್ಬಗಳ ಒಂದು ಕಂತು ಮುಗಿದಂತೆ. ಅಂತಹ ಹಬ್ಬಗಳಲ್ಲಿ ಅತ್ಯಂತ ಮಹತ್ವದ ಹಬ್ಬವೆಂದರೆ ರಾಖಿ ಹಬ್ಬ.
ಈ ಹಬ್ಬಕ್ಕೆ ಅಣ್ಣ-ತಂಗಿಯರ ಸಂಬಂಧವನ್ನು ಗಟ್ಟಿಗೊಳಿಸುವ ಹಿನ್ನೆಲೆ ಇದೆ. ಸಹೋದರರಿಗೆ ರಾಖಿ ಕಟ್ಟುವುದಕ್ಕಾಗಿಯೆ ಸಹೋದರಿಯರು ಊರಿಗೆ ಬರುತ್ತಾರೆ, ಇಲ್ಲವೆ ತಾವಿದ್ದಲ್ಲಿಗೇ ಸಹೋದರರನ್ನು ಕರೆಸಿಕೊಳ್ಳುತ್ತಾರೆ. ಸಹೋದರರು ರಾಖಿ ಕಟ್ಟಿದ ಸಹೋದರಿಯರಿಗೆ ಉತ್ತಮೋತ್ತಮ ಕಾಣಿಕೆಗಳನ್ನು ನೀಡಿ ಏನಾದರೂ ನಿನ್ನೊಂದಿಗೆ ನಾವಿದ್ದೇವೆ ಎಂಬ ಅಭಯವನ್ನು ನೀಡುತ್ತಾರೆ.
ಈ ಹಿಂದಿನ ದಿನಗಳಲ್ಲಿ ರಕ್ಷಾಬಂಧನವೆಂದು ಸಹೋದರಿಯರು ಸಹೋದರರ ಕೈ ಮಣಿಕಟ್ಟಿಗೆ ದೇವರ ಮುಂದಿರಿಸಿದ, ಸಂಕಲ್ಪ ಮಾಡಿದ ದಾರವನ್ನು ಕಟ್ಟುತ್ತಿದ್ದರು. ಆದರೆ ಮುಂದೆ ಇದು ಒಂದು ದೊಡ್ಡ ಉದ್ಯಮವಾಗಿ ಎಲ್ಲ ಅಂಗಡಿಗಳಲ್ಲಿ ಬಣ್ಣಬಣ್ಣದ ವಿವಿಧ ಬಗೆಯ ರಾಖಿಗಳು ಬಂದವು. ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಒಂದು ರೂಪಾಯಿಯಿಂದ ಹಿಡಿದು ನೂರು, ಸಹಸ್ರಾರು ರೂಪಾಯಿಗಳವರೆಗೂ ರಾಖಿ ಇರುವುದನ್ನು ಕಾಣುತ್ತೇವೆ. ನರೇಗಲ್ಲದ ಬಹುತೇಕ ಅಂಗಡಿಗಳಲ್ಲಿ ರಾರಾಜಿಸುತ್ತಿರುವ ರಾಖಿಗಳು ಕಣ್ಮನ ಸೆಳೆಯುತ್ತಿವೆ.
ವರ್ಷದಿಂದ ವರ್ಷಕ್ಕೆ ರಾಖಿ ಬೇಡಿಕೆ ಹೆಚ್ಚಾಗುತ್ತಿದೆ. ನಾವೂ ಸಹ ಅನೇಕ ಬಗೆಯ ರಾಖಿಗಳನ್ನು ತರಿಸುತ್ತೇವೆ. ಆದರೂ ರಾಖಿ ಖರೀದಿಸುವ, ಬಗೆಬಗೆಯ ರಾಖಿ ಕೇಳುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಹತ್ತು-ಹನ್ನೆರಡು ದಿನಗಳಿಂದ ನಾವು ರಾಖಿ ಮಾರುತ್ತಿದ್ದೇವೆ ಎನ್ನುತ್ತಾರೆ ರಾಖಿ ಅಂಗಡಿಯ ನಿಂಗಪ್ಪ ಬೇವಿನಕಟ್ಟಿ.