ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ 3-4 ದಿನಗಳಿಂದ ಗುಡುಗು-ಸಿಡಿಲಬ್ಬರದೊಂದಿಗೆ ಸುರಿಯುತ್ತಿರುವ ಮಳೆ ರೈತ ಸಮುದಾಯದಲ್ಲಿ ಸಂತಸದ ಜತೆಗೆ ಆತಂಕವನ್ನೂ ಸೃಷ್ಟಿಸುತ್ತಿದೆ. ರೈತ ಕೃಷಿ ಮಾನ್ಸೂನ್ ಮಳೆಯೊಂದಿಗಿನ ಜೂಜಾಟವಾಗಿದೆ ಎಂಬ ಮಾತು ಪರಿಸ್ಥಿತಿಯನ್ನು ಸಾಕ್ಷೀಕರಿಸುವಂತಾಗಿದೆ.
ಶುಕ್ರವಾರವೂ ಪಟ್ಟಣ ಸೇರಿ ತಾಲೂಕಿನಾದ್ಯಂತ ಉತ್ತಮ ಮಳೆ ಮುಂದುವರೆದಿದ್ದು, ಇದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈಗಾಗಲೇ ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗುವ ಆತಂಕದ ಜತೆಗೆ ಹಬ್ಬದ ಸಂಭ್ರಮವನ್ನೂ ಕಸಿದಿದೆ. ಶುಕ್ರವಾರ ಸಂತೆ ದಿನವಾದ್ದರಿಂದ ತರಕಾರಿ ಸೇರಿ ಎಲ್ಲ ಬಗೆಯ ವ್ಯಾಪಾರಸ್ಥರು, ಸಂತೆಗೆ ಬಂದಿದ್ದ ಗ್ರಾಮೀಣ ಜನರು ಊರು ಸೇರಲು ಪರದಾಡಿದರು.
ಸದ್ಯ ಮುಂಗಾರಿನ ಎಲ್ಲ ಬೆಳೆಗಳು ಫಲ ಬಿಡುವ ಹಂತದಲ್ಲಿದ್ದು, ನಿರಂತರ ಮಳೆಗೆ ತಗ್ಗು ಪ್ರದೇಶಗಳಲ್ಲಿನ ಒಂದಷ್ಟು ಬೆಳೆಯೂ ಹಾನಿಗೀಡಾಗುತ್ತದೆ. ಈಗಾಗಲೇ ಹೆಸರು ಬೆಳೆ ಕಟಾವಿಗೆ ಬಂದಿದ್ದು, ಮಳೆ ಬಿಡುವು ಕೊಡದಿದ್ದರೆ ಹೆಸರು ಕಟಾವು/ಒಕ್ಕಲಿಗೆ ಅಡಚಣೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಅಲ್ಲದೇ ಅತಿಯಾದ ತೇವಾಂಶ ಶೇಂಗಾ, ಹತ್ತಿ, ಮೆಣಸಿನಕಾಯಿ, ಈರುಳ್ಳಿ ಎಲ್ಲ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮಳೆಗಾಗಿ ಕಾದ ರೈತರು ಈಗ ಮಳೆ ಬಿಡುವಿಗಾಗಿ ಬೇಡುವಂತಾಗಿದೆ.
ಲಕ್ಷ್ಮೇಶ್ವರ ಸೇರಿ ತಾಲೂಕಿನ ಎಲ್ಲ ಭಾಗದಲ್ಲಿ ಸುರಿದ ಮಳೆಯಿಂದಾಗಿ ಕೆರೆ-ಕಟ್ಟೆಗಳು, ಕೃಷಿ ಹೊಂಡ, ಹಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶಗಳಲ್ಲಿನ ಜಮೀನುಗಳಲ್ಲಿ ನೀರು ಹರಿದು, ಸಂಗ್ರಹವಾಗಿ ಒಂದಷ್ಟು ಬೆಳೆ ಜಲಾವೃತವಾಗಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ ಈಗಾಗಲೇ ಹಲವು ಮನೆಗಳು ಕುಸಿದಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇಲ್ಲದಿಲ್ಲ.