ಗದಗ:-ಕುಡಿದ ಮತ್ತಿನಲ್ಲಿ ಠಾಣೆಗೆ ನುಗ್ಗಿ ಪೊಲೀಸ್ ಅಧಿಕಾರಿ ಸಹೋದರನೋರ್ವ ಕಿರಿಕ್ ಮಾಡಿರುವ ಘಟನೆ ಇಲ್ಲಿನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಜರುಗಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಐಪಿಎಸ್ ಅಧಿಕಾರಿ ಅನಿತಾ ಹದ್ದಣ್ಣವರ್ ಸಹೋದರ ಅಕ್ಷತ್ ಹದ್ದಣ್ಣವರ್ ನಿಂದ ಈ ರಂಪಾಟ ನಡೆದಿದ್ದು, ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಹೈಡ್ರಾಮವೇ ನಡೆದಿದೆ. ಕುಡಿದ ಮತ್ತಿನಲ್ಲಿ ಏಕಾಏಕಿ ಕಾರ್‌ನಲ್ಲಿ ಬಂದು ಪೊಲೀಸ್ ಠಾಣೆಗೆ ನುಗ್ಗಿದ ಅಕ್ಷತ್ ಹದ್ದಣ್ಣವರ್ , ಠಾಣೆಯ ಬಳಿಯಿದ್ದ ಸ್ಥಳಿಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಸಿಪಿಐ, ಪಿಎಸ್‌ಐ ವಾಹನ ನಿಲ್ಲಿಸುವ ಸ್ಥಳದಲ್ಲಿ ಅಕ್ಷತ್ ತನ್ನ ಕಾರ್ ಪಾರ್ಕಿಂಗ್ ಮಾಡಿದ್ದ. ಅಧಿಕಾರಿಗಳ ಕಾರು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಠಾಣೆಯ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದರು. ಬೆಟಗೇರಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪವಿದೆ.
ಐಪಿಎಸ್ ಅಧಿಕಾರಿ ಸಹೋದರನ ರಂಪಾಟ ಕಂಡು, ಸಾರ್ವಜನಿಕರು ಅಕ್ಷತ್ ಹದ್ದಣ್ಣವರ್ ಹಾಗೂ ಸಹಚರನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.