ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೊರಚ, ಕೊರವ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದಲ್ಲಿಯೇ ದೇವರನ್ನು ಕಂಡ ಮಹಾನ್ ಶರಣ ನುಲಿಯ ಚಂದಯ್ಯನವರು ಎಂದು ಮುಖ್ಯ ಶಿಕ್ಷಕ ಬಿ.ಬಿ. ಕುರಿ ಹೇಳಿದರು.
ಪಟ್ಟಣದ ಕೆಜಿಎಸ್ ಸರ್ಕಾರಿ ಶಾಲೆಯಲ್ಲಿ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಲ್ಲು ತಂದು ಹಗ್ಗ ಹೊಸೆದು, ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು. ಗುರು-ಲಿಂಗ-ಜಂಗಮರ ತತ್ವವನ್ನು ಜಗತ್ತಿಗೆ ಪಸರಿಸಿ, ನುಡಿದಂತೆ ನಡೆದ ಶ್ರೇಷ್ಠ ವಚನಕಾರರಾಗಿದ್ದರು. ಬಸವಣ್ಣನವರ ವಿನೂತನ ವಿಚಾರಧಾರೆಗೆ, ಧಾರ್ಮಿಕ ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದು ದಾಸೋಹ ಮಾಡುತ್ತ ಬದುಕಿದ ಶ್ರೇಷ್ಠ ಕಾಯಕ ಯೋಗಿ. ಇಂತಹ ಶರಣರ ವಚನಗಳನ್ನು ಓದಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಈವೇಳೆ ವಿದ್ಯಾರ್ಥಿಗಳು ಶಿವಶರಣ ನುಲಿಯ ಚಂದಯ್ಯನವರ ಬಗ್ಗೆ ಮಾತನಾಡಿದರು. ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ಎಸ್.ಐ. ಜಗಾಪೂರ, ರಾಜೇಶ್ವರಿ ತೊಂಡಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಕೋಡಿಕೊಪ್ಪದ ಶಾಲೆಯಲ್ಲಿ: ಕೋಡಿಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಲಿಯ ಚದಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಶರಣರ ತತ್ವಗಳನ್ನು ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಎಲ್.ಎಸ್. ಶಿವಪ್ಪಗೌಡ್ರ, ಎಲ್.ಎಸ್. ಗಂಗಾಪೂರ, ಎನ್.ಎ. ಹುಬ್ಬಳ್ಳಿಕರ ಮತ್ತು ಶಿಕ್ಷಕರಾದ ಬಿ.ಎಸ್. ಕರಮುಡಿ, ಜೆ.ಡಿ. ಶಾಲ್ದಾರ ಉಪಸ್ಥಿತರಿದ್ದರು.



