ನವದೆಹಲಿ:- ಸತ್ಯವಂತರಿಗೆ ಕಾಂಗ್ರೆಸ್ ನಲ್ಲಿ ಕಾಲವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಜಣ್ಣ ಅವರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ಕೆ.ಎನ್ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ. ಕಾಂಗ್ರೆಸ್‍ನಲ್ಲಿ ಸತ್ಯವಂತರಿಗೆ ಕಾಲವಿಲ್ಲ. ರಾಹುಲ್ ಗಾಂಧಿ ಅವರ ಹೇಳಿಕೆಗೆ ರಾಜಣ್ಣ ಸತ್ಯವಾದ ಉತ್ತರ ಕೊಟ್ಟಿದ್ದರು. ಸತ್ಯದ ಅರಿವಾಗುತ್ತಿದೆ, ಸಹಜವಾಗಿ ಮಹಾದೇವಪುರದಲ್ಲಿ ಮತದಾರರು ಹೆಚ್ಚಾಗುತ್ತಿದ್ದಾರೆ. ಹೆಚ್ಚಿನ ಮತದಾನ ಅಲ್ಲಿ ಆಗುತ್ತಿದೆ. ಬಿಜೆಪಿಗೆ ಹೆಚ್ಚು ಮತ ಬಂದಿದೆ. ಪಿ.ಸಿ ಮೋಹನ್ ಗೆದ್ದಿದ್ದರು. ರಾಜಣ್ಣ ಇದೇ ಸತ್ಯ ಹೇಳಿದ್ದರು ಎಂದಿದ್ದಾರೆ.
ನಮ್ಮ ಸರ್ಕಾರ ಇತ್ತು, ನಮ್ಮದೇ ತಪ್ಪು ಎಂದು ರಾಜಣ್ಣ ಹೇಳಿದ್ದರು. ಜನರ ಪ್ರಶ್ನೆಯನ್ನೇ ಅವರು ಕೇಳಿದ್ದರು. ಸತ್ಯ ಹೇಳಿದ್ದಕ್ಕೆ ಅರಗಿಸಿಕೊಳ್ಳಲಾಗದೇ ರಾಜೀನಾಮೆ ಪಡೆಯಲಾಗಿದೆ. ರಾಹುಲ್ ಗಾಂಧಿ ಸತ್ಯ ಎಂದು ಹೇಳುತ್ತಾರೆ. ಯಾಕೆ ಅಫಿಡೆವಿಟ್ ಸಲ್ಲಿಕೆ ಮಾಡುತ್ತಿಲ್ಲ. ರಾಜಣ್ಣ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು. ಇವತ್ತು ಸಿದ್ದರಾಮಯ್ಯ ಅವರಿಗೂ ರಾಜಣ್ಣರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಮೂಲಕ ದೇಶಕ್ಕೆ ರಾಹುಲ್ ಗಾಂಧಿಯವರ ಸುಳ್ಳು ಗೊತ್ತಾಗಿದೆ ಎಂದು ಕಿಡಿಕಾರಿದ್ದಾರೆ.
ಸತ್ಯ ಹೇಳಿದರೆ ಅಫಿಡೆವಿಟ್ ಸಲ್ಲಿಸಲು ಯಾಕೆ ಹೆದರಬೇಕು? ಅಮೇಥಿ, ರಾಯ್‍ಬರೇಲಿ, ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ಮನೆ ವಿಳಾಸ ಸರಿಯಾಗಿ ಇಲ್ಲದಿದ್ದರೆ ಸೊನ್ನೆ ಎಂದು ಬರುತ್ತದೆ. ಅದನ್ನು ಸುಳ್ಳು ಮತದಾರರು ಎಂದರೆ? ಚಿಕ್ಕ ಚಿಕ್ಕ ಮನೆಯಲ್ಲಿ ಬೇರೆ ಬೇರೆ ಕಡೆಯಿಂದ ಜನರು ಬಂದಿರುತ್ತಾರೆ. ಒಂದೇ ನೋಂದಣಿ ಇರುವ ಮನೆಯಲ್ಲಿ ವಠಾರ ಮಾಡಿಕೊಂಡು ಜನರು ಬದುಕುತ್ತಾರೆ. ಬಿಎಲ್‍ಎಗಳನ್ನು ಯಾಕೆ ಮಾಡುತ್ತಾರೆ? ಅವರದೇ ಸರ್ಕಾರ ಇತ್ತಲ್ಲ, ಯಾಕೆ ಅವರು ಪ್ರಶ್ನೆ ಮಾಡಲಿಲ್ಲ? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದ್ದಾರೆ.