ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಕೇಂದ್ರ ಇಲ್ಲದಂತಾಗಿದ್ದು, ಶಿರಹಟ್ಟಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭಿಸಬೇಕೆಂದು ಸೋಮವಾರ ಶಿರಹಟ್ಟಿ ತಹಸೀಲ್ದಾರರಿಗೆ ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ವೀರೇಶ ಪಸಾರದ, ಶಿರಹಟ್ಟಿಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು, ದವಸ ಧಾನ್ಯಗಳನ್ನು, ತರಕಾರಿಗಳನ್ನು ಮತ್ತು ಜಾನುವಾರುಗಳನ್ನು ಮಾರಾಟ ಮಾಡಲು ಸಂಬಂಧಿಸಿದ ಅಧಿಕಾರಿಗಳು ಮಾರುಕಟ್ಟೆಯನ್ನು ಪುನಃ ಪ್ರಾರಂಭಿಸಬೇಕು. ಈಗಿರುವ ಮಾರುಕಟ್ಟೆ ಹಾಳಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಅನಧಿಕೃತ ಹಂದಿ ಸಾಕಾಣಿಕೆ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಹಿಂದೆ ಅನೇಕ ಬಾರಿ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ರೈತರ ಅನುಕೂಲಕ್ಕಾಗಿ ಮಾರುಕಟ್ಟೆ ಪ್ರಾರಂಭಿಸದೇ ಇದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಸವರಾಜ ವಡವಿ, ದೇವೇಂದ್ರ ಶಿಂಧೆ, ಇಮ್ರಾನ್ ಭಾವಿಕಟ್ಟಿ, ಇಲಿಯಾಸ ಮುಳಗುಂದ, ತೌಸಿಫ ವಡ್ಡಟಿ ಅನ್ವರ ಬೇರವಡ, ಮೌಲಾಲಿ ಮಂಡಲ, ಮುಸ್ತಫಾ ಸಂಶಿ, ಇಮ್ರಾನ್ ಶಿಗ್ಲಿ ಮುಂತಾದವರು ಉಪಸ್ಥಿತರಿದ್ದರು.