ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜಯಂತ್(31) ಆತ್ಮಹತ್ಯೆಗೆ ಯತ್ನಸಿದ ಯುವಕನಾಗಿದ್ದು,
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಗಾಯಗೊಂಡಿರುವ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಯ್ಯಪ್ಪನಹಳ್ಳಿಯಿಂದ ನ್ಯಾಷನಲ್ ಕಾಲೇಜ್ ಕಡೆ ಹೊರಟಿದ್ದ ಜಯಂತ್ ರಾತ್ರಿ 10 ಗಂಟೆಗೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿದಿದ್ದ. ಬಳಿಕ ನ್ಯಾಷನಲ್ ಕಾಲೇಜ್ ಕಡೆ ಹೋಗಲು ಪ್ಲಾಟ್ಫಾರಂ ನಾಲ್ಕಕ್ಕೆ ಬಂದಿದ್ದ. ನಂತರ ರೈಲು ಬರುತ್ತಿದ್ದಂತೆಯೇ ಏಕಾಏಕಿ ಹಳಿ ಮೇಲೆ ಹಾರಿದ್ದ.
ಯುವಕ ಹಳಿಗೆ ಜಿಗಿಯುತ್ತಿರುವುದನ್ನು ಕಂಡ ಕೂಡಲೇ ಮೆಟ್ರೋ ಆಪರೇಟರ್ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದರು. ತಕ್ಷಣವೇ ಮೆಟ್ರೋ ಸಿಬ್ಬಂದಿ ಹಳಿಯಲ್ಲಿ ಬಿದ್ದಿದ್ದ ಜಯಂತನನ್ನು ರಕ್ಷಣೆ ಮಾಡಿದ್ದು ಆ್ಯಂಬುಲೆನ್ಸ್ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಜಯಂತ್ನ ತಲೆ, ಕಣ್ಣು, ಹೊಟ್ಟೆ ಮತ್ತು ಕೈ-ಕಾಲುಗಳಿಗೆ ಗಾಯಗಳಾಗಿವೆ. ಘಟನೆ ನಂತರ ಸುಮಾರು 30 ನಿಮಿಷ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಜಯಂತ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಬಗ್ಗೆ ಉಪ್ಪಾರಪೇಟೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.