ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣುವಲ್ಲಿ ವಿಫಲವಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾದ ಪುಷ್ಪಾ ಅರುಣ್ ಕುಮಾರ್ ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಹಾಗೂ ವೈರತ್ವ ಇದ್ದೇ ಇದೆ. ಸಿನಿಮಾ ರಂಗ ಕೂಡ ಇದಕ್ಕೆ ಹೊರತಾಗಿಲ್ಲ. ಚಿತ್ರವನ್ನು ನೋಡದೇ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆ ಮಾಡುವ ಕೆಲಸ ಮಾಡುತ್ತಿದ್ದು, ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪುಷ್ಪಾ ಮನವಿ ಮಾಡಿದ್ದಾರೆ.
‘ಟಾಕಿಂಗ್ ಪ್ಯಾರಟ್’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ ಪುಷ್ಪಾ ಅವರು, ‘ನಮ್ಮ ಸಿನಿಮಾದ ಪ್ರಚಾರ ನೋಡಿ ಕೆಲವರು ನೆಗೆಟಿವ್ ಟಾಕ್ ಹಬ್ಬಿಸಿದ್ದರು. ಸಿನಿಮಾ ಮಾಡುವವರಿಗೆ ನಿಜಕ್ಕೂ ಕಷ್ಟ ಇದೆ. ಇಲ್ಲಿ ನೂರು ತೊಂದರೆ ಇದೆ. ಮುಖ್ಯಮಂತ್ರಿ ಎದುರು ಹೋಗ್ತೀನಿ. ಇದನ್ನು ತಡೆಯಿರಿ ಎಂದು ಕೇಳುತ್ತೇನೆ. ಇದು ಸರ್ಕಾರದ ಕೆಲಸ’ ಎಂದು ಪುಷ್ಪಾ ಹೇಳಿದ್ದಾರೆ.
‘ಸಿನಿಮಾ ನೋಡಿ ಬರೆದರೆ ತೊಂದರೆ ಇಲ್ಲ. ಆದರೆ, ಸುಮಾರು ಜನರು ಸಿನಿಮಾ ನೋಡದೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದರಿಂದ ಅನೇಕರಿಗೆ ತೊಂದರೆ ಆಗುತ್ತಿದೆ. ನಾವು ದೂರು ತೆಗೆದುಕೊಂಡು ಬಂದಾಗ ಇದನ್ನು ಸ್ವೀಕರಿಸಬೇಕು. ಇಲ್ಲವಾದಲ್ಲಿ ರಾಕ್ಲೈನ್ ವೆಂಕಟೇಶ್ಗೆ ಹೇಳಿ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಪುಷ್ಪಾ ಅವರು ಹೇಳಿದ್ದಾರೆ.