ವಿಜಯಸಾಕ್ಷಿ ಸುದ್ದಿ, ಗದಗ: ಆಗಸ್ಟ್ 24ರಂದು ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನಕ್ಕೆ ಗದುಗಿನ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಪರಿಷತ್ತಿನ ಗೌರವಾಧ್ಯಕ್ಷರಾದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಸುಧಾ ಹುಚ್ಚಣ್ಣವರ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಪರವಾಗಿ ಶರಣೆ ಗಿರಿಜಕ್ಕನವರ ನಿವಾಸಕ್ಕೆ ಭೇಟಿ ನೀಡಿ, ಅವರಿಗೆ ಅಧಿಕೃತವಾಗಿ ಆಮಂತ್ರಣ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎ. ಬಳಿಗೇರ ಮಾತನಾಡಿ, ಗಿರಿಜಕ್ಕನವರು ತಮ್ಮ ಹೃದಯದ ತುಂಬಾ ಶರಣರ ವಿಚಾರಗಳನ್ನು ತುಂಬಿಕೊಂಡವರು. ಶರಣರ ತತ್ವಚಿಂತನೆ, ಅಧ್ಯಯನ, ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಶರಣರ ತತ್ವಗಳನ್ನು ಈ ನಾಡಿನಲ್ಲಿ ಅಷ್ಟೇ ಅಲ್ಲದೆ ಪಕ್ಕದ ಆಂಧ್ರದಲ್ಲೂ ತಮ್ಮ ಪ್ರವಚನಗಳ ಮೂಲಕ ಪ್ರಸಾರ ಮಾಡಿದ್ದಾರೆ .ಶರಣರು ಕಂಡ ಅನಾದಿ ಬಸವಣ್ಣ-ವಚನ ಸಂಕಲನ, ವಚನ ವ್ಯಾಖ್ಯಾನ ಮತ್ತು ವಚನಾಧಾರಿತ ಲೇಖನಗಳನ್ನೊಳಗೊಂಡ ಅಪರೂಪದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಗಿರಿಜಕ್ಕ ಧರ್ಮರೆಡ್ಡಿ ಅವರು ನಮ್ಮ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವುದು ಜಿಲ್ಲೆಯ ಶರಣ ಸಾಹಿತಿಗಳಿಗೆ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶರಣೆ ರತ್ನಕ್ಕ ಪಾಟೀಲ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬೂದಪ್ಪ ಅಂಗಡಿ, ಗದಗ ನಗರ ಘಟಕದ ಅಧ್ಯಕ್ಷ ಪ್ರಕಾಶ ಅಸುಂಡಿ, ತಾಲೂಕು ಕದಳಿ ವೇದಿಕೆಯ ಅಧ್ಯಕ್ಷೆ ಸುಲೋಚನ ಐಹೊಳೆ, ಎನ್.ಎಚ್. ಸಕ್ರಗೌಡರ್, ಎಸ್.ಎಮ್. ಮುಗದ, ಅಶ್ವಥ್ ರೆಡ್ಡಿ, ಕದಳಿ ವೇದಿಕೆಯ ಅನ್ನಪೂರ್ಣ ವರವಿ, ಗೌರಕ್ಕ ಬಡಿಗಣ್ಣವರ್, ರೇಖಾ ಯಾಪಲಪರ್ವಿ ಮುಂತಾದವರು ಇದ್ದರು.